ಕೊರೊನಾ ಸಂದರ್ಭದಲ್ಲಿ ಮತ್ತೆ ಸುದ್ದಿಯಾಗಿರುವ ರೇಣುಕಾಚಾರ್ಯ | ಈ ಬಾರಿ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ? - Mahanayaka
2:08 PM Wednesday 11 - December 2024

ಕೊರೊನಾ ಸಂದರ್ಭದಲ್ಲಿ ಮತ್ತೆ ಸುದ್ದಿಯಾಗಿರುವ ರೇಣುಕಾಚಾರ್ಯ | ಈ ಬಾರಿ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ?

renukacharya
01/06/2021

ದಾವಣಗೆರೆ: ಕೊರೊನಾ ಸಂದರ್ಭದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಮಾಡುತ್ತಿರುವ ಕೆಲಸವನ್ನು ಸಚಿವರೇ ಮಾಡುತ್ತಿಲ್ಲ. ತನ್ನ ಕ್ಷೇತ್ರದ ಜನತೆಗೆ ಕೊರೊನಾ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿರುವ ರೇಣುಕಾಚಾರ್ಯ ತಮ್ಮ ಸಮಯವನ್ನೆಲ್ಲ ಕೊರೊನಾ ನಿರ್ವಹಣೆಗಾಗಿಯೇ ಮುಡಿಪಾಗಿಟ್ಟಿದ್ದಾರೆ.

ಇದೀಗ ಕೊವಿಡ್ ನಿಂದ ಮೃತಪಟ್ಟ ಯುವಕನ ಮೃತದೇಹವನ್ನು ಗ್ರಾಮಕ್ಕೆ ತರಲು ಕೆಲವರು ವಿರೋಧಿಸಿದ್ದು, ಈ ಸಂದರ್ಭದಲ್ಲಿ ಒಬ್ಬ ಜನಪ್ರತಿನಿಧಿಯಾಗಿ, ತಾವೇ ಆಂಬುಲೆನ್ಸ್ ಚಲಾಯಿಸಿಕೊಂಡು ಮೃತದೇಹವನ್ನು ಗ್ರಾಮಕ್ಕೆ ತಂದು ಅಂತ್ಯಸಂಸ್ಕಾರ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ.

ತಮ್ಮ ಕ್ಷೇತ್ರದ ಯುವಕನೋರ್ವ ಕೊವಿಡ್ ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕರು ಬೆಳಗ್ಗೆಯಷ್ಟೇ ಯುವಕನ ಆರೋಗ್ಯ ವಿಚಾರಿಸಿ ಬಂದಿದ್ದರು. ಆದರೆ ಇದಾಗಿ 1 ಗಂಟೆಗಳಲ್ಲಿಯೇ ದುರದೃಷ್ಟವಶಾತ್  ಯುವಕ ಮೃತಪಟ್ಟಿದ್ದಾನೆ.

ಕೊರೊನಾದಿಂದ ಮೃತಪಟ್ಟ ಯುವಕನ ಮೃತದೇಹವನ್ನು ಗ್ರಾಮಕ್ಕೆ ತರಬಾರದು ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ರೇಣುಕಾಚಾರ್ಯ ಅವರೇ ಮುಂದೆ ನಿಂತು, ಗ್ರಾಮಸ್ಥರಿಗೆ ತಿಳುವಳಿಕೆ ನೀಡಿ ಒಪ್ಪಿಸಿ, ತಾವೇ ಆಂಬುಲೆನ್ಸ್ ಮೂಲಕ ಮೃತದೇಹವನ್ನು ಗ್ರಾಮಕ್ಕೆ ತಂದು ತಾವೇ ಮುಂದೆ ನಿಂತು ಅಂತ್ಯಸಂಸ್ಕಾರ ನಡೆಸಿದ್ದಾರೆ.

ಕೊರೊನಾ ಸಂದರ್ಭದಲ್ಲಿ ರೇಣುಕಾಚಾರ್ಯ ಅವರ ಕಾರ್ಯನಿರ್ವಹಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಬಿಜೆಪಿಯ ಸಚಿವರುಗಳು ಮಾಡದಿರುವಂತಹ ಕೆಲಸವನ್ನು ರೇಣುಕಾಚಾರ್ಯ ಮಾಡುತ್ತಿದ್ದಾರೆ. ನಿಜಕ್ಕೂ ಅವರ ಕೆಲಸ ಶ್ಲಾಘನೀಯ, ಎಸಿ ರೂಮ್ ನಲ್ಲಿ ಕುಳಿತು ಆದೇಶ ನೀಡಿಹೋಗುವವರಿಗಿಂತ ರೇಣುಕಾಚಾರ್ಯ ಅವರು ಫೀಲ್ಡಿಗೆ ಇಳಿದು ಕೆಲಸ ಮಾಡುತ್ತಿದ್ದಾರೆ. ಇದು ಇತರ ಶಾಸಕರಿಗೂ ಮಾದರಿಯಾಗಲಿ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ