ಮಾವನ ಮನೆಗೆ ಬೆಂಕಿ ಇಟ್ಟ ಅಳಿಯ: ನೊಂದ ಕುಟುಂಬಕ್ಕೆ ಎನ್.ಮಹೇಶ್ ಸಾಂತ್ವನ, ನೆರವು
ಯಳಂದೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಳಿಯನೇ ಮಾವನ ಮನೆಗೆ ಬೆಂಕಿ ಹಚ್ಚಿದ ಘಟನೆ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ನಡೆದಿದ್ದು, ಘಟನೆಯಿಂದ ನೊಂದ ಕುಟುಂಬಗಳನ್ನು ಕೊಳ್ಳೇಗಾಲ ಶಾಸಕರಾದ ಎನ್.ಮಹೇಶ್ ಭೇಟಿ ಮಾಡಿ ಧೈರ್ಯ ತುಂಬಿದರು.
ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದ ರಾಜು ಎಂಬಾತನಿಗೆ 12 ವರ್ಷಗಳ ಹಿಂದೆ ಪುಟ್ಟನಂಜಶೆಟ್ಟಿ ಮಗಳು ಮಂಜಮ್ಮನನ್ನು ವಿವಾಹ ಮಾಡಿಕೊಡಲಾಗಿತ್ತು. ರಾಜು ದಿನನಿತ್ಯ ಕುಡಿದು ಬಂದು ಪತ್ನಿಯ ಜೊತೆಗೆ ಜಗಳ ಮಾಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ತನ್ನ ತಂದೆಯ ಮನೆಗೆ ಬಂದು ವಾಸವಿದ್ದರು.
ಇತ್ತ ತವರು ಮನೆಗೆ ಬಂದರೂ ಅಲ್ಲಿಯೂ ನೆಮ್ಮದಿಯಾಗಿರಲು ಬಿಡದ ಪತಿ ರಾಜು, ಮಾವನ ಮನೆಗೆ ಬಂದು ಬಾ ಹೋಗೋಣ ಎಂದು ಪತ್ನಿಯ ಬಳಿ ಜಗಳವಾಡಿದ್ದಾನೆ. ಈ ವೇಳೆ ಆಕೆ ಹೋಗಲು ನಿರಾಕರಿಸಿದ್ದು, ಈ ಸಿಟ್ಟಿನಿಂದ ಮಾವನ ಮನೆಗೆ ರಾಜು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಪರಿಣಾಮವಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿತ್ತು.
ಘಟನೆ ಹಿನ್ನೆಲೆಯಲ್ಲಿ ಕುಟುಂಬಸ್ಥರನ್ನು ಭೇಟಿ ಮಾಡಿದ ಶಾಸಕ ಎನ್.ಮಹೇಶ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೇ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ಕುಟುಂಬಕ್ಕೆ ಆಗಿರುವ ನಷ್ಟವನ್ನು ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ನಿಂದ ತಕ್ಷಣ ಒದಗಿಸಿ ಎಂದು ಸೂಚಿಸಿದ ಅವರು, ಕುಟುಂಬಕ್ಕೆ ತಾತ್ಕಾಲಿಕವಾಗಿ ವಾಸ ಮಾಡಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಜೊತೆಗೆ ಕಿಡಿಗೇಡಿ ಅಳಿಯ ರಾಜುನನ್ನು ಬಂಧಿಸುವಂತೆ ಪೊಲೀಸರಿಗೆ ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka