ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಬಗ್ಗೆ ಅವಹೇಳನ | ವಿಶ್ವಸಂಸ್ಥೆಯ ಒಪ್ಪಂದ ರಾಯಭಾರಿ ಸ್ಥಾನದಿಂದ ರಣದೀಪ್ ವಜಾ
ಮುಂಬೈ: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಬಾಲಿವುಡ್ ನಟ ರಣದೀಪ್ ಹೂಡಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಇದರ ಬೆನ್ನಲ್ಲೇ ವಿಶ್ವಸಂಸ್ಥೆಯ ಪರಿಸರ ಒಪ್ಪಂದದ ವಲಸೆ ಪ್ರಭೇದಗಳ ಸಂರಕ್ಷಣಾ ರಾಯಭಾರೀ ಸ್ಥಳದಿಂದ ಅವರನ್ನು ವಜಾಗೊಳಿಸಲಾಗಿದೆ.
ರಣದೀಪ್ ಹೂಡಾ ಅವರು ಮಾತನಾಡಿದ್ದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವಿವಾದ ಸೃಷ್ಟಿಯಾಗಿದೆ. ಮಾಧ್ಯಮ ಸಂಸ್ಥೆಯೊಂದಕ್ಕೆ 2012ರಲ್ಲಿ ನೀಡಿದ್ದ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಣದೀಪ್ ಹೂಡಾ ಆಕ್ಷೇಪಕಾರಿ ಹೇಳಿಕೆಯನ್ನು ನೀಡಿದ್ದರು. ಈ ವಿಡಿಯೋ 9 ವರ್ಷ ಬಳಿಕ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೀಡಾಗಿದೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, “ಅರೆಸ್ಟ್ ರಣದೀಪ್ ಹೂಡಾ” ಎಂಬ ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿತ್ತು. ಈ ವಿಡಿಯೋವು ಜಾತಿ, ಲಿಂಗ ಮತ್ತು ಬೇಧಭಾವವನ್ನು ಸೂಚಿಸುತ್ತದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ರಣದೀಪ್ ನೀಡಿರುವ ಹೇಳಿಕೆಯ ಬೆನ್ನಲ್ಲೇ ತನ್ನ ವೆಬ್ ಸೈಟ್ ನಲ್ಲಿ ಹೇಳಿಕೆ ಪ್ರಕಟಿಸಿರುವ ಸಿಎಂಎಸ್, ವಿಶ್ವಸಂಸ್ಥೆಯ ಪರಿಸರ ಒಪ್ಪಂದದ ವಲಸೆ ಪ್ರಭೇದಗಳ ಸಂರಕ್ಷಣಾ ರಾಯಭಾರಿಯಾಗಿ ರಣದೀಪ್ ಹೂಡಾ ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದೆ. ಅವರು ನೀಡಿರುವ ಈ ಹೇಳಿಕೆಗಳು ಸಿಎಂಎಸ್ ನ ಅಥವಾ ವಿಶ್ವಸಂಸ್ಥೆಯ ಮೌಲ್ಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದೆ.