ಜಾತಿಯ ಕಾರಣಕ್ಕಾಗಿ ದಲಿತ ಮಹಿಳೆಯರ ಮೀನು ವ್ಯಾಪಾರಕ್ಕೆ ಅಡ್ಡಿ | ಅಂಬೇಡ್ಕರ್ ಭಾವ ಚಿತ್ರಕ್ಕೆ ಅವಮಾನ

udupi news
06/06/2021

ಉಡುಪಿ: ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಬೇಕಾದರೆ, ದಲಿತ ಸಮುದಾಯ ವ್ಯಾಪಾರಕ್ಕೆ ಮುಂದಾಗಬೇಕು ಎಂದು ನಿನ್ನೆಯಷ್ಟೇ ಮಹಾನಾಯಕ ಅಂತರ್ಜಾಲ ಮಾಧ್ಯಮದಲ್ಲಿ ಖ್ಯಾತ ಸಾಹಿತಿ ರಘೋತ್ತಮ ಹೊ.ಬ. ಅವರು ಲೇಖನ ಬರೆದಿದ್ದರು. ಆದರೆ ದಲಿತರು ಸಣ್ಣ ವ್ಯಾಪಾರಕ್ಕೆ ಕೈ ಹಾಕಿದರೂ, ಅದನ್ನು ಬೇರು ಸಮೇತ ಹೇಗೆ ಕಿತ್ತು ಹಾಕುತ್ತಾರೆ ಎನ್ನುವುದಕ್ಕೆ  ನಿದರ್ಶನ ಎಂಬಂತೆ ಉಡುಪಿ ಜಿಲ್ಲೆಯಲ್ಲಿ ಘಟನೆಯೊಂದು ನಡೆದಿದೆ.

ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ಮೂವರು ಮಹಿಳೆಯರು ಸೇರಿ, ತಮ್ಮ ಜೀವನೋಪಾಯಕ್ಕಾಗಿ ಸಣ್ಣದಾದ ಮೀನಿನ ಅಂಗಡಿಯೊಂದನ್ನು ತೆರೆದಿದ್ದಾರೆ. ಆದರೆ, ಇವರು ದಲಿತ ಸಮುದಾಯದವರು, ಹಾಗಾಗಿ ಅವರು ಮೀನು ಮಾರಾಟ ಮಾಡಬಾರದು ಎಂದು ಕೆಲವು ಜಾತಿವಾದಿಗಳು  ದೂರು ನೀಡಿದ್ದಾರೆ ಎನ್ನಲಾಗಿದೆ. ಈ ದೂರಿನನ್ವಯ ಉಡುಪಿ ನಗರ ಸಭೆಯ ಆರೋಗ್ಯಾಧಿಕಾರಿ, ಈ ಮೂವರು ಮಹಿಳೆಯರಿಗೆ ವ್ಯಾಪಾರ ಮಾಡದಂತೆ ತೊಂದರೆ ನೀಡುತ್ತಿದ್ದಾರೆ. ಅಂಗಡಿಯನ್ನು ತೆರವುಗೊಳಿಸಲು ಒತ್ತಡ ಹೇರುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಇನ್ನೂ ಘಟನೆಯ ಸಂಬಂಧ ಮಹಿಳೆಯರ ಬೆಂಬಲಕ್ಕೆ ನಿಂತ ಸಮಾಜ ಸೇವಕಿ ಸುಷ್ಮಾ ರಾಜ್ ಅವರು ತಮ್ಮ ಇನ್ಟಾಗ್ರಾಮ್ ನಲ್ಲಿ ಈ ಘಟನೆಯನ್ನು ವಿವರಿಸಿದ್ದಾರೆ.  ದಲಿತರು ಮೀನು ಮಾರಾಟ ಮಾಡಬಾರದು ಎನ್ನುವ ಕಾರಣಕ್ಕಾಗಿ ಅಂಗಡಿಯನ್ನು ತೆರವುಗೊಳಿಸಲು ಆರೋಗ್ಯಾಧಿಕಾರಿ ಯತ್ನಿಸುತ್ತಿದ್ದಾರೆ, ಇಲ್ಲಿ ಈ ಮಹಿಳೆಯರು ಅಂಗಡಿ ಮಾಡುವ ಮೊದಲು ಕಸದ ರಾಶಿಗಳಿದ್ದವು, ಇದೊಂದು ಡಂಪಿಂಗ್ ಯಾರ್ಡ್ ಆಗಿತ್ತು.. ಇಲ್ಲಿ ನಾಯಿ ಸತ್ತು ಬಿದ್ದರೂ ತೆಗೆಯಲು ಯಾವ ಆರೋಗ್ಯಾಧಿಕಾರಿಯೂ ಬರುತ್ತಿರಲಿಲ್ಲ. ಆದರೆ, ದಲಿತ ಮಹಿಳೆಯರು ಇಲ್ಲಿ ಮೀನಿನ ಅಂಗಡಿ ಇಟ್ಟಿದ್ದಾರೆ ಎನ್ನುವ ಕಾರಣಕ್ಕೆ ಆರೋಗ್ಯಾಧಿಕಾರಿ ಅಂಗಡಿ ತೆರವಿಗೆ ಯತ್ನಿಸುತ್ತಿದ್ದಾರೆ. ಅಂಗಡಿಯಲ್ಲಿ ಹಾಕಲಾಗಿರುವ ಅಂಬೇಡ್ಕರ್ ಅವರ ಫೋಟೋವನ್ನು ಅಂಗಡಿಯಿಂದ ಹೊರಕ್ಕೆಸೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ದಲಿತರು ಮೀನು ಮಾರಾಟದ ಅಂಗಡಿ ಇಡಬಾರದು, ಮೀನುಗಾರರಿಗೆ ಮಾತ್ರವೇ ಮೀನು ಮಾರಾಟಕ್ಕೆ ಅವಕಾಶ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದು, ಜಾತಿಯ ಕಾರಣಕ್ಕಾಗಿ ಅನಗತ್ಯ ಕಾರಣಗಳನ್ನು ನೀಡಿ, ಮಹಿಳೆಯರ ಅಂಗಡಿಯನ್ನು ತೆರವು ಮಾಡಲು ಪ್ರಯತ್ನ ನಡೆದಿದೆ ಎನ್ನುವ ಅನುಮಾನಗಳು ಇದೀಗ ಗಟ್ಟಿಯಾಗಿದ್ದು, ಇದರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಉಡುಪಿ ನಗರ ಸಭೆಯ ವ್ಯಾಪ್ತಿಯ ಕಾಡುಬೆಟ್ಟು ನಿವಾಸಿಯಾಗಿರುವ ರಾಧ‌ ಕೋಂ ಅಶೋಕ ಬ್ರಹ್ಮ ಗಿರಿಯಲ್ಲಿ ಮೀನು ಅಂಗಡಿ ವ್ಯಾಪಾರ ಆರಂಭ ಮಾಡಿದ ಸಂದರ್ಭದಲ್ಲಿ ಉಡುಪಿ ನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಕರುಣಾಕರ್ ಅವರು, ಅಂಗಡಿ ತೆಗೆಯಿರಿ ಎಂದು ದಬಾಯಿಸಿದ್ದಾರೆ. ಈ ಪ್ರದೇಶದಲ್ಲಿರುವ ಬಹುತೇಕ ಅಂಗಡಿಗಳಿಗೆ ಲೈಸೆನ್ಸ್ ಇಲ್ಲ. ಆದರೆ, ದಲಿತ ಮಹಿಳೆಯರನ್ನು ಮಾತ್ರವೇ ಅವರು ದಬಾಯಿಸಲು ಮುಂದಾಗಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಯಾವ್ಯಾವುದೋ ಜಿಲ್ಲೆಗಳಿಂದ ಬಂದವರೆಲ್ಲ ಇಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುತ್ತಾರೆ. ಇದೇ ಊರಿನವರಾದ ನಮಗೆ ಅವಕಾಶ ನೀಡುತ್ತಿಲ್ಲ. ಇಲ್ಲಿರುವ ಯಾವುದೇ ಅಂಗಡಿಗಳಿಗೆ ಲೈಸೆನ್ಸ್ ಕೂಡ ಇಲ್ಲ. ಅಧಿಕಾರಿಗಳಿಗೆ 3 ಸಾವಿರ ರೂಪಾಯಿಗಳನ್ನು ಎಲ್ಲರೂ ನೀಡುತ್ತಿದ್ದಾರೆ. ಆದರೆ, ನಾವು ಹಣ ಕೊಟ್ಟರೂ ಅವರು ತೆಗೆದುಕೊಳ್ಳಲು ತಯಾರಿಲ್ಲ ಎಂದು ಸುಷ್ಮಾ ಅವರು ಮಾಡಿರುವ ವಿಡಿಯೋದಲ್ಲಿ ಮಹಿಳೆಯರು ಆರೋಪಿಸಿದ್ದಾರೆ.

ಘಟನೆ ಸಂಬಂಧ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ.  ಸಂಘಟನೆಯ ರಾಜ್ಯ ಸಂಚಾಲಕರಾದ ಉದಯ್ ಕುಮಾರ್ ತಲ್ಲೂರ್ ಅವರು ಆರೋಗ್ಯಾಧಿಕಾರಿ ಕರುಣಾಕರ ಅವರ ವಿರುದ್ಧ ಕಾನೂನು ಹೋರಾಟಕ್ಕೆ ಮಹಿಳೆಯರಿಗೆ ನೆರವಾಗಲು ಮುಂದಾಗಿದ್ದಾರೆ.  ಅಧಿಕಾರಿಯ ವಿರುದ್ಧ ಎಫ್ ಐ ಆರ್ ದಾಖಲಿಸಿ, ಅಮಾನತು ಮಾಡಬೇಕು ಎಂದು ನಗರಸಭಾ ಆಯುಕ್ತರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಈ ಮಹಿಳೆಯರಿಗೆ ನ್ಯಾಯ ಸಿಗದೇ ಇದ್ದರೆ, ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

YouTube video player

ಇತ್ತೀಚಿನ ಸುದ್ದಿ

Exit mobile version