ಆಡಳಿತ, ವಿರೋಧ ಪಕ್ಷಗಳ ನಡುವೆ ಗದ್ದಲಕ್ಕೆ ಕಾರಣವಾದ ಮೀನುಗಾರರ ತಾತ್ಕಾಲಿಕ ಶೆಡ್ ತೆರವು ಪ್ರಕರಣ
ಕಿನ್ನಿಮೂಲ್ಕಿಯ ಸ್ವಾಗತಗೋಪುರದ ಬಳಿಯ ಮಹಿಳಾ ಮೀನುಗಾರರ ತಾತ್ಕಾಲಿಕ ಶೆಡ್ ತೆರವುಗೊಳಿಸಿದ ಪ್ರಕರಣವು ಇಂದು ನಡೆದ ಉಡುಪಿ ನಗರಸಭೆಯ ಸಾಮಾನ್ಯಸಭೆಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಸದಸ್ಯರ ನಡುವೆ ಭಾರೀ ಗದ್ದಲಕ್ಕೆ ಕಾರಣವಾಯಿತು.
ವಿಷಯ ಪ್ರಸ್ತಾಪಿಸಿದ ಸದಸ್ಯ ದೇವದಾಸ್ ಶೆಟ್ಟಿಗಾರ್ ಅವರು ಕಿನ್ನಿಮೂಲ್ಕಿಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿದ ಸ್ಥಳೀಯ ಕಾಂಗ್ರೆಸ್ ಸದಸ್ಯೆ ಅಮೃತಾ ಕೃಷ್ಣಮೂರ್ತಿ ವಿರುದ್ಧ ಕಾನೂನು ಕ್ರಮ ಜರುಗಿಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಮೃತಾ ಕೃಷ್ಣಮೂರ್ತಿ, ಮೀನುಗಾರರ ಮನವಿ ಮೇರೆಗೆ ಶೆಡ್ ನಿರ್ಮಿಸಿಕೊಟ್ಟಿದ್ದೇನೆ. ಇದು ತಾತ್ಕಾಲಿಕ ಶೆಡ್ ಹೊರತು, ಶಾಶ್ವತ ಶೆಡ್ ಅಲ್ಲ. ಅಧಿಕಾರಿಗಳು ನೋಟಿಸ್ ನೀಡದೆ ಏಕಾಏಕಿ ತೆರವು ಮಾಡಿದ್ದಾರೆ ಎಂದು ಅಳಲುತೋಡಿಕೊಂಡರು. ಅವರ ಸ್ಪಷ್ಟನೆಗೆ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ವಾಗ್ದಾಳಿ ನಡೆಸಿದರು. ಇದರಿಂದ ಕೆಲಕಾಲ ಗದ್ದಲ ಉಂಟಾಗಿ, ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೇ ತೀವ್ರ ಮಾತಿನ ಚಕಮಕಿ ಉಂಟಾಯಿತು.
ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ರಘುಪತಿ ಭಟ್ ಆಡಳಿತ ಪಕ್ಷದವರನ್ನು ಸಮಾಧಾನಪಡಿಸಿದರು. ರಾಯುಕ್ತ ಉದಯ ಶೆಟ್ಟಿ ಮಾತನಾಡಿ, ಈ ಬಗ್ಗೆ ಕಾನೂನು ಪ್ರಕಾರ ಕ್ರಮಕೈಗೊಂಡಿದ್ದೇವೆ. ಸರಕಾರಿ ಜಾಗದಲ್ಲಿರುವ ಅಕ್ರಮ ಕಟ್ಟಡ ತೆರವು ಮಾಡುವ ವೇಳೆ ನೋಟಿಸ್ ನೀಡಬೇಕೆಂದಿಲ್ಲ. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರು ವಿಷಾದನೀಯ ಎಂದರು.
ಈ ವೇಳೆ ಆಡಳಿತ ಪಕ್ಷದ ಸದಸ್ಯರಾದ ಗಿರೀಶ್ ಅಂಚನ್, ಪ್ರಭಾಕರ ಪೂಜಾರಿ ಸಹಿತ ವಿವಿಧ ಸದಸ್ಯರು ಅಮೃತಾ ಕೃಷ್ಣಮೂರ್ತಿ ವಿರುದ್ಧ ಖಂಡನಾ ನಿರ್ಣಯಕೈಗೊಂಡು, ಅವರ ಸದಸ್ಯತ್ವ ಅನರ್ಹಗೊಳಿಸಬೇಕು. ಇಲ್ಲದಿದ್ದರೆ, ಸಭೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಪಟ್ಟುಹಿಡಿದರು.
ಆಗ ಮಧ್ಯಪ್ರವೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಅವರು, ಕಾರ್ಯಾಚರಣೆ ತೆರವು ವೇಳೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ವಿಷಾದನೀಯ ಎಂದು ಅಮೃತಾ ಕೃಷ್ಣಮೂರ್ತಿ ಪರ ಹೇಳಿಕೆ ನೀಡಿದರು. ಆ ಬಳಿಕ ಚರ್ಚೆ ತಣ್ಣಗಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka