ಕಸದ ರಾಶಿಯಲ್ಲಿ ಮಹಿಳೆಯ ಮೃತದೇಹ ಪತ್ತೆ!
27/10/2020
ಲಕ್ನೋ: ಮಹಿಳೆಯೊಬ್ಬರ ಮೃತದೇಹ ಕಸ ಎಸೆಯುವ ಸ್ಥಳದಲ್ಲಿ ಪತ್ತೆಯಾಗಿರುವ ಘಟನೆ ಕ್ರಿಮಿನಲ್ ಗಳ ಸ್ವರ್ಗ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಮಹಿಳೆಯ ಶವವನ್ನು ಪ್ರಾಣಿಗಳು ಎಳೆದಾಡುತ್ತಿದ್ದ ಸಂದರ್ಭದಲ್ಲಿ ಪ್ರಕರಣವು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಿಸಾರೆ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಫತೇಹುಲ್ಲಾಪುರ್ ಬಳಿಯ ಸ್ಮಶಾನದ ಬಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಹತ್ಯೆಗೀಡಾಗಿರುವ ಮಹಿಳೆ ಸುಮಾರು 30 ವರ್ಷ ಪ್ರಾಯದವರಿರಬಹುದು ಎಂದು ಅಂದಾಜಿಸಲಾಗಿದೆ. ಮಹಿಳೆಯ ಗುರುತು ಪತ್ತೆಯಾಗಬಾರದು ಎಂಬಂತೆ ರುಂಡಮುಂಡ ಬೇರ್ಪಡಿಸಲಾಗಿರುವುದು ಪತ್ತೆಯಾಗಿದೆ. ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿ ಎಸೆಯಲಾಗಿತ್ತು.
ಘಟನೆ ಸಂಬಂಧ ಉತ್ತರ ಪ್ರದೇಶ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.