ಕಾವೇರಿ ನದಿ ನೀರು ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೇ ಪರಿಹಾರ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: “ಸದ್ಯ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಎದ್ದಿರುವ ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೇ ಪರಿಹಾರ. ಈ ಬಗ್ಗೆ ನಾವು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದೇವೆ” ಎಂದು ನೀರಾವರಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶುಕ್ರವಾರ ಅವರು ಪ್ರತಿಕ್ರಿಯಿಸಿ, ಕಾವೇರಿ ನದಿ ನೀರು ಬಿಡುಗಡೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆ ಹಾಗೂ ಕಾವೇರಿ ನದಿ ನೀರು ನಿರ್ವಹಣೆ ಪ್ರಾಧಿಕಾರವೇ ಪರಿಶೀಲಿಸಬೇಕು ಎಂದು ಹೇಳಿರುವ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು ಹೇಳಿದ್ದಿಷ್ಟು;
“ನ್ಯಾಯಾಲಯವೇ ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆ ಮಾಡಿದ್ದು, ಇದು ತಾಂತ್ರಿಕ ಸಮಿತಿಯಾಗಿದೆ. ಸದ್ಯ ಅವರು ತಾಂತ್ರಿಕ ಅಂಶಗಳ ಬಗ್ಗೆ ಗಮನಹರಿಸಬೇಕು.
ಈ ಪರಿಸ್ಥಿತಿಯಲ್ಲಿ ಪ್ರಮುಖ ಪರಿಹಾರ ಎಂದರೆ ಅದು ಮೇಕೆದಾಟು ಯೋಜನೆ ಮಾತ್ರ. ಮೇಕೆದಾಟು ಆಣೆಕಟ್ಟು ನಿರ್ಮಾಣವಾಗಿದ್ದರೆ ಇಂದು ಈ ಸಮಸ್ಯೆ ಹಾಗೂ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ. ಕಳೆದ ವರ್ಷ 400ಕ್ಕೂ ಹೆಚ್ಚು ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗಿದೆ. ಅದರಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಮೇಕೆದಾಟು ಆಣೆಕಟ್ಟು ಮೂಲಕ ಹಿಡಿದಿಟ್ಟಿದ್ದರೆ ಈ ಸಮಸ್ಯೆಯೇ ಎದುರಾಗುತ್ತಿರಲಿಲ್ಲ.
ಮೇಕೆದಾಟು ಆಣೆಕಟ್ಟು ನೀರನ್ನು ನಾವು ನೀರಾವರಿಗೆ ಬಳಸಲು ಸಾಧ್ಯವಿಲ್ಲ. ಕೇವಲ ಕುಡಿಯುವ ನೀರಿಗೆ ಬಳಸಬಹುದು. ಮೇಕೆದಾಟು ಇಂತಹ ಸಂಕಷ್ಟದ ಸಮಯದಲ್ಲಿ ಹೆಚ್ಚು ಸಹಾಯಕ್ಕೆ ಬರುತ್ತದೆ.
ಈ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಗಮನ ಹರಿಸಬೇಕಿದೆ. ನಾವು ನಮ್ಮ ಅರ್ಜಿಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದೇವೆ. ನಾವು ಈ ವಿಚಾರವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರುತ್ತೇವೆ.
ನಮ್ಮ ರಾಜ್ಯದಲ್ಲಿ ಕೆಲವು ವಿರೋಧ ಇದ್ದರೂ ನಾವು ನ್ಯಾಯಾಲಯದ ಆದೇಶ ಗೌರವಿಸುತ್ತೇವೆ. ನಮ್ಮ ಸರ್ಕಾರ ನ್ಯಾಯಾಲಯಕ್ಕೆ ಎಲ್ಲಾ ಮಾಹಿತಿ ನೀಡಿದ್ದು, ನಮ್ಮ ರಾಜ್ಯದ ರೈತರ ಹಿತ ಕಾಯಲು ಬದ್ಧವಿದ್ದೇವೆ.
ತಮಿಳುನಾಡು ತನ್ನ ಪಾಲಿನ ನೀರನ್ನು ಯಾವ ಉದ್ದೇಶಕ್ಕಾಗಿ ಬೇಕಾದರೂ ಬಳಸಬಹುದು. ಅದನ್ನು ನಾವು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ತಮಿಳುನಾಡು ಸಂಕಷ್ಟದ ಸಮಯದಲ್ಲಿ ಈ ನೀರನ್ನು ಎಚ್ಚರಿಕೆಯಿಂದ ಬಳಸಬಹುದಾಗಿತ್ತು. ನಾವು ನಮ್ಮ ರೈತರಿಗೆ ಬಿತ್ತನೆ ಮಾಡದಂತೆ ಸಲಹೆ ನೀಡಿರುವಂತೆ ಅವರು ಅವರ ರೈತರಿಗೆ ಸಲಹೆ ನೀಡಬಹುದಾಗಿತ್ತು.
ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ರಾಜಕೀಯ ಉದ್ದೇಶದ ವಿರೋಧದ ಹೊರತಾಗಿ ರಾಜ್ಯದ ಯಾವುದೇ ರೈತರು ವಿರೋಧ ವ್ಯಕ್ತಪಡಿಸಿಲ್ಲ. ತಮಿಳುನಾಡಿಗೆ ನೀರು ಬಿಡಬೇಡಿ ಎಂದು ಹೇಳಲಾಗುತ್ತಿದೆಯೇ ಹೊರತು, ನಮಗೆ ನಷ್ಟವಾಗಿದೆ ಎಂದು ಯಾರೂ ಹೇಳುತ್ತಿಲ್ಲ. ಕಾರಣ ನಾವು ನಮ್ಮ ರೈತರಿಗೆ ಅಗತ್ಯ ಸಮಯದಲ್ಲಿ ನೀರು ಹರಿಸಿ, ಅವರ ನೆರವಿಗೆ ಧಾವಿಸಿದ್ದೇವೆ.
ನಮ್ಮ ಜಿಲ್ಲಾ ಸಚಿವರು ರೈತರ ಜೊತೆ ಸಭೆ ಮಾಡಿ ಈ ಸಮಯದಲ್ಲಿ ಬಿತ್ತನೆ ಮಾಡಬೇಡಿ ಎಂದು ಮನವಿ ಮಾಡಿ, ಅರಿವು ಮೂಡಿಸಿದ್ದಾರೆ.
ಇಂದು ಸುಪ್ರೀಂ ಕೋರ್ಟ್ ನೀರು ಬಿಡುಗಡೆ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಸಮಸ್ಯೆಗೆ ಪರಿಹಾರ ಬೇಕಾದರೆ ಅದಕ್ಕೆ ಮೇಕೆದಾಟು ಯೋಜನೆಯೊಂದೇ ಪರಿಹಾರ ಎಂದು ಸುಪ್ರೀಂ ಕೋರ್ಟ್ ಹಾಗೂ ತಮಿಳುನಾಡಿಗೆ ಹೇಳಲು ಬಯಸುತ್ತೇನೆ” ಎಂದು ತಿಳಿಸಿದರು.
ಕೊವಿಡ್ ಅಕ್ರಮಗಳ ಬಗ್ಗೆ ನ್ಯಾಯಾಂಗ ತನಿಖೆ ವಿಚಾರವಾಗಿ ಮಾಧ್ಯಮಗಳು ಮಾಹಿತಿ ಕೇಳಿದಾಗ, “ಈಗ ನಾನು ಆ ಬಗ್ಗೆ ಹೆಚ್ಚಿಗೆ ಏನೂ ಹೇಳುವುದಿಲ್ಲ. ಆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರ ಮಾತನಾಡುತ್ತೇನೆ” ಎಂದರು.