ಮಗುವಿಗೆ ತಿಂಡಿ ಕೊಡಿಸಲು 5 ರೂ. ಕೇಳಿದ್ದಕ್ಕೆ ಮಗುವನ್ನು ಗೋಡೆಗೆ ಬಡಿದು ಕೊಂದ ತಂದೆ
05/02/2021
ಮುಂಬೈ: ಮಗುವಿಗೆ ಸಿಹಿ ತಿಂಡಿ ಕೊಡಿಸಲು 5 ರೂಪಾಯಿ ಬೇಕು ಎಂದು ಗಂಡನ ಬಳಿ ಪತ್ನಿ ಕೇಳಿದ್ದಕ್ಕೆ ಪತಿ 20 ತಿಂಗಳ ಮಗುವನ್ನು ಗೋಡೆಗೆ ಬಡಿದು ಹತ್ಯೆ ಮಾಡಿರುವ ಭೀಕರ ಘಟನೆ ಮಹಾರಾಷ್ಟ್ರದ ಮುಂಬೈನಿಂದ 900 ಕಿ.ಮೀ. ದೂರದಲ್ಲಿರುವ ಗೋಂಡಿಯಾ ಜಿಲ್ಲೆಯಲ್ಲಿ ನಡೆದಿದೆ.
28 ವರ್ಷದ ತಂದೆ ವಿವೇಕ್ ಯುಕೆ ಆರೋಪಿಯಾಗಿದ್ದಾನೆ. ಮಗು ತುಂಬಾ ಅಳುತ್ತಿದೆ. ಮಗುವನ್ನು ಸುಮ್ಮನಾಗಿಸಲು ಖಾಜಾ(ತಿಂಡಿ) ಕೊಡಿಸಲು 5 ರೂಪಾಯಿ ನೀಡಿ ಎಂದು ಪತ್ನಿ ಕೇಳಿದ್ದಾಳೆ. ಈ ಸಂದರ್ಭ ಕೋಪಗೊಂಡ ಪತಿ ಮಗುವನ್ನು ಎತ್ತಿ ಮನೆಯ ಬಾಗಿಲಿಗೆ ಬಡಿದಿದ್ದಾನೆ. ಪತ್ನಿ ತಡೆದರೂ ಬಿಡದ ಆತ ಮತ್ತೆ ಮತ್ತೆ ಬಾಗಿಲಿಗೆ ಮಗುವನ್ನು ಬಡಿದಿದ್ದಾನೆ ಎಂದು ಮಗುವಿನ ತಾಯಿ ವರ್ಷಾ ವಿವೇಕ್ ಪೊಲೀಸರಿಗೆ ತಿಳಿಸಿದ್ದಾರೆ.
ನಾನು ಮಗುವನ್ನು ಕಾಪಾಡಲು ಬಹಳ ಕಷ್ಟಪಟ್ಟೆ, ಆದರೆ ಆತ ತಡೆಯಲು ಹೋದ ನನ್ನ ಮೇಲೆಗೂ ತೀವ್ರವಾಗಿ ಹಲ್ಲೆ ನಡೆಸಿದ. ಆದರೂ ಮಗುವನ್ನು ಉಳಿಸಿಕೊಳ್ಳಲು ಆಸ್ಪತ್ರೆಗೂ ಕರೆದುಕೊಂಡು ಹೋದೆ. ಆದರೆ ಅದಾಗಲೇ ಮಗಳು ಸಾವನ್ನಪ್ಪಿದ್ದಾಳೆ ಎಂದು ವರ್ಷಾ ತಿಳಿಸಿದ್ದಾರೆ.