ಒಂದೇ ದಿನದಲ್ಲಿ ಅಂದರ್: ಮಹಿಳೆಯರ ಪರ್ಸ್ ಕದಿಯಲು ಹೋಗಿ ಸಿಕ್ಕಾಕೊಂಡ ನಾಪತ್ತೆಯಾಗಿದ್ದ ಕೈದಿ!!
![suresh](https://www.mahanayaka.in/wp-content/uploads/2023/08/suresh.jpg)
ಚಾಮರಾಜನಗರ: ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದಾಗ ತಪ್ಪಿಸಿಕೊಂಡಿದ್ದ ವಿಚಾರಣಾ ಕೈದಿ ಮಹಿಳೆಯರ ಪರ್ಸ್ ಕದಿಯಲು ಹೋಗಿ ಸಿಕ್ಕಿ ಬಿದ್ದಿರುವ ಘಟನೆ ಚಾಮರಾಜನಗರ ಸಮೀಪದ ಕೌಲಂದೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಸುರೇಶ್(30) ಪೊಲೀಸರ ಕೈಗೆ ಸಿಕ್ಕಿಬಿದ್ದ ವಿಚಾರಣಾ ಕೈದಿಯಾಗಿದ್ದು ತಪ್ಪಿಸಿಕೊಂಡ 24 ತಾಸಲ್ಲೇ ಮತ್ತೇ ಖಾಕಿ ಬಲೆಗೆ ಈ ಖತರ್ನಾಕ್ ಬಿದ್ದಿದ್ದಾನೆ.
ಏನಿದು ಕೈದಿಯ ಕರಾಮತ್ತು:
ಕೆಲ ದಿನಗಳ ಹಿಂದೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಸುರೇಶ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ತಮಿಳುನಾಡು ಸತ್ಯಮಂಗಲಂನ ನ್ಯಾಯಾಲಯಕ್ಕೆ ಶುಕ್ರವಾರ ವಿಚಾರಣೆಗೆ ಕರೆದೊಯ್ಯುವಾಗ ಆಸನೂರಿನ ಹೋಟೆಲ್ ಬಳಿ ಪೊಲೀಸರನ್ನು ನೂಕಿ ಪರಾರಿಯಾಗಿದ್ದನು.
ಆ ವೇಳೆ, ಪೊಲೀಸ್ ಸಿಬ್ಬಂದಿಗಳಾದ ಶಿವಾಜಿ ಅವರ ಕಿರುಬೆರಳು ಮುರಿದು, ಕಾಲುಗಳಿಗೆ ಗಾಯವಾಗಿತ್ತು. ವೀರಭದ್ರ ಎಂಬವರಿಗೆ ತರಚಿದ ಗಾಯಗಳಾಗಿತ್ತು. ಪೊಲೀಸರಿಂದ ತಪ್ಪಿಸಿಕೊಂಡ ಈತ ಪೊದೆಗಳ ಒಳಕ್ಕೆ ನುಗ್ಗಿ ಕಣ್ತಪ್ಪಿಸಿಕೊಂಡಿದ್ದ.
ರೈಲಿನಲ್ಲಿ ಸಿಕ್ಕಾಕೊಂಡ ಖತರ್ನಾಕ್:
ಆಸನೂರು ಬಳಿ ಹಾಕಲಾಗಿದ್ದ ಕೈ ಬೇಡಿಯನ್ನು ಕಲ್ಲಿನಿಂದ ಜಜ್ಜಿಕೊಂಡು ಬೇಡಿ ಕಳಚಿಕೊಂಡು, ಹಾಕಿದ್ದ ಬಿಳಿ ಬಟ್ಟೆಯನ್ನು ಕಳಚಿ ಯಾರ್ಯಾರೋ ಕಾಡಿ ಬೇಡಿ ಚಾಮರಾಜನಗರಕ್ಕೆ ಬಂದಿದ್ದಾನೆ ಎನ್ನಲಾಗಿದೆ.
ಚಾಮರಾಜನಗರದಿಂದ ನಂಜನಗೂಡಿಗೆ ನಿನ್ನೆ ರಾತ್ರಿ ರೈಲಿನಲ್ಲಿ ಹೋಗಿದ್ದ ಈತ ಇಂದು ನಂಜನಗೂಡಿನಿಂದ ವಾಪಾಸ್ ಚಾಮರಾಜನಗರಕ್ಕೆ ಬರುವಾಗ ಮಹಿಳಾ ಬೋಗಿಯನ್ನು ಏರಿ ಪರ್ಸ್ ಕದಿಯಲು ಯತ್ನಿಸಿದಾಗ ಅಲ್ಲೇ ಇದ್ದ ಸಹ ಪ್ರಯಾಣಿಕರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಒಟ್ಟಿನಲ್ಲಿ ನಾಪತ್ತೆಯಾಗಿದ್ದ ಕೈದಿಯ ಪ್ರಕರಣ ಸುಖಾಂತ್ಯಗೊಂಡಿದ್ದು ಚಾಮರಾಜನಗರ ಗ್ರಾಮಾಂತರ ಠಾಣಾ ಪೊಲೀಸರು ಸುರೇಶ್ ನ ಆರೋಗ್ಯ ತಪಾಸಣೆಗೊಳಿಸಿ ಸತ್ಯಮಂಗಲಂ ನ್ಯಾಯಾಲಯ ವಶಕ್ಕೆ ಕೊಡಲು ತೆರಳಿದ್ದಾರೆ.
ಇಬ್ಬರು ಪೊಲೀಸರಿಗೆ ಅಮಾನತು ಶಿಕ್ಷೆ:
ವಿಚಾರಣಾ ಕೈದಿ ತಪ್ಪಿಸಿಕೊಂಡಿದ್ದ ಹಿನ್ನೆಲೆ ಮೀಸಲು ಪಡೆಯ ವೀರಭದ್ರ ಹಾಗೂ ಶಿವಾಜಿ ಎಂಬವರನ್ನು ಅಮಾನತುಗೊಳಿಸಿ ಚಾಮರಾಜನಗರ ಎಸ್ಪಿ ಆದೇಶ ನೀಡಿದ್ದಾರೆ. ಕರ್ತವ್ಯಲೋಪ ಹಿನ್ನೆಲೆ ಇಬ್ಬರ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಸೂಚಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw