ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಬಿಟ್ಟು ಹೋಗಿ:  ಅಧಿಕಾರಿಗಳ ವಿರುದ್ಧ ಶಾಸಕ ಪ್ರಭು ಚೌವ್ಹಾಣ್ ಗರಂ - Mahanayaka

ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಬಿಟ್ಟು ಹೋಗಿ:  ಅಧಿಕಾರಿಗಳ ವಿರುದ್ಧ ಶಾಸಕ ಪ್ರಭು ಚೌವ್ಹಾಣ್ ಗರಂ

prabhu chauhan
28/06/2024

ಔರಾದ: ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಔರಾದ್‌ ನಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುತ್ತಿವೆ. ಬಹುತೇಕ ಇಲಾಖೆಗಳಲ್ಲಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಇದರಿಂದಾಗಿ ನನ್ನ ಹೆಸರು ಕೆಡುತ್ತಿದೆ. ಇಷ್ಟವಿದ್ದರೆ ಮನಸ್ಪೂರ್ತಿಯಿಂದ ಕೆಲಸ ಮಾಡಬೇಕು. ಇಲ್ಲವೆಂದರೆ ಬಿಟ್ಟು ಹೋಗಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ. ಚವ್ಹಾಣ್ ಅವರು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.

ಔರಾದ(ಬಿ) ತಾಲ್ಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಜೂನ್ 27ರಂದು ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸಭೆ ಆರಂಭವಾಗುತ್ತಿದ್ದಂತೆ ಅಧಿಕಾರಿಗಳ ಹಾಜರಾತಿಯ ವಿವರಣೆ ಪಡೆದರು. ಈ ವೇಳೆ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಕೆಲವು ಅಧಿಕಾರಿಗಳು ಸಭೆಗೆ ಆಗಮಿಸದೇ ಇರುವುದರಿಂದ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಕೋಪಗೊಂಡರು. ಹಿಂದೆ ನಡೆದ ಕೆಡಿಪಿ ಸಭೆಗಳಲ್ಲಿ ಗೈರು ಹಾಜರಾದವರ ಮೇಲೆ ಏನು ಕ್ರಮವಾಗಿದೆ. ವಿವರಣೆ ಕೊಡಬೇಕೆಂದು ಪಟ್ಟು ಹಿಡಿದರು. ಸಮಾಧಾನಕರ ಉತ್ತರ ಸಿಗದಿರುವುದಕ್ಕೆ ತೀವ್ರ ಬೇಸರಗೊಂಡರು.

ಪ್ರತಿ ಸಭೆಯಲ್ಲಿ ಅಧಿಕಾರಿಗಳು ಗೈರಾಗುತ್ತಾರೆ. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನೋಟಿಸ್ ನೀಡಿ ಕೈತೊಳೆದುಕೊಳ್ಳುತ್ತಾರೆ. ಮುಂದೆ ಯಾವುದೇ ಕಠಿಣ ಕ್ರಮವಾಗುವುದಿಲ್ಲ. ಪ್ರತಿ ಸಾರಿ ಇದು ಪರಿವರ್ತನೆಯಾಗುತ್ತಿದೆ. ಕಾಟಾಚರಕ್ಕಾಗಿ ಸಭೆ ನಡೆದರೆ ಏನು ಪ್ರಯೋಜನ ?, ನಾನು ವೈಯಕ್ತಿಕ ಕೆಲಸಕ್ಕಾಗಿ ಸಭೆ ನಡೆಸುತ್ತಿಲ್ಲ. ಇದು ಜನತೆಗಾಗಿ ಸಭೆಯಿದೆ. ಅಧಿಕಾರಿಗಳಲ್ಲಿಯೂ ಜವಾಬ್ದಾರಿ ಕಾಣಿಸಬೇಕು ಎಂದರು.

ಸಭೆಯಲ್ಲೇ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಮಾಹಿತಿ ನೀಡಿದರು. ಪ್ರತಿ ಸಾರಿ ಹೀಗಾದರೆ ಸಹಿಸುವುದಿಲ್ಲ. ಹಿಂದೆ ನಡೆದ ಎಲ್ಲ ಕೆಡಿಪಿ ಸಭೆಗಳಲ್ಲಿ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವಾಗಬೇಕು. ಮುಂದೆ ನಡೆಯುವ ಸಭೆಗಳಲ್ಲಿ ಎಲ್ಲ ಅಧಿಕಾರಿಗಳು ನಿಗದಿತ ಸಮಯಕ್ಕೆ ಹಾಜರಿರಬೇಕು. ಇಲ್ಲವಾದಲ್ಲಿ ತಮ್ಮ ವಿರುದ್ಧವೇ ಶಿಸ್ತು ಕ್ರಮಕ್ಕಾಗಿ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಔರಾದ(ಬಿ) ಮತ್ತು ಕಮಲನಗರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಚ್ಚರಿಸಿದರು.

ತಾಲ್ಲೂಕಿನ ಆಡಳಿತ ಕೇಂದ್ರವಾದ ತಹಸೀಲ್ ಕಛೇರಿಯೇ ಗಬ್ಬು ನಾರುತ್ತಿದೆ. ಉತ್ತಮ ಶೌಚಾಲಯವಿಲ್ಲ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಕಚೇರಿ ಆವರಣ ಕಸಮಯವಾಗಿದೆ. ಜನ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ತಹಸೀಲ್ದಾರರು ಏನು ಮಾಡುತ್ತಿದ್ದೀರಿ ? ಎಂದು ಖಾರವಾಗಿ ಪ್ರಶ್ನಿಸಿದರು.

ಎಲ್ಲ ತಾಲ್ಲೂಕು ಅಧಿಕಾರಿಗಳು ಕಡ್ಡಾಯವಾಗಿ ತಾಲ್ಲೂಕು ಕೇಂದ್ರದಲ್ಲೇ ವಾಸಿಸಬೇಕೆಂದು ಬಹಳಷ್ಟು ಸಾರಿ ತಿಳಿಸಿದರೂ ಬಹುತೇಕ ಅಧಿಕಾರಿಗಳು ಬೀದರನಲ್ಲಿಯೇ ವಾಸಿಸುತ್ತಿದ್ದಾರೆ. ಇದರಿಂದ ಕಛೇರಿ ಕೆಲಸಗಳಿಗೆ ತೊಡಕಾಗುತ್ತಿದೆ. ಎಲ್ಲರೂ ತಾಲ್ಲೂಕು ಕೇಂದ್ರದಲ್ಲೇ ಉಳಿದು ಕೆಲಸ ಮಾಡಬೇಕು ತಮ್ಮ ಅಧಿನ ಅಧಿಕಾರಿ ಮತ್ತು ಸಿಬ್ಬಂದಿಯ ಮೇಲೆ ನಿಯಂತ್ರಣವಿರಬೇಕು. ಎಲ್ಲ ಕಛೇರಿಗಳಲ್ಲಿ ಜನಸ್ನೇಹಿಯಾದ ವಾತಾವರಣ ನಿರ್ಮಾಣವಾಗಬೇಕು. ಯಾವುದೇ ರೀತಿಯ ದೂರುಗಳು ಬಾರದ ರೀತಿಯಲ್ಲಿ ಕೆಲಸ ಮಾಡಬೇಕೆಂದು ಸೂಚಿಸಿದರು.

ಔರಾದ(ಬಿ) ಪಟ್ಟಣದೆಲ್ಲೆಡೆ ಕಸದ ರಾಶಿ ತುಂಬಿದೆ. ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಂಡು ಪಟ್ಟಣದ ಎಲ್ಲ ವಾರ್ಡ್ಗಳನ್ನು ಸ್ವಚ್ಛಗೊಳಿಸಬೇಕು. ಸಮರ್ಪಕ ಕುಡಿಯುವ ನೀರು ಪೂರೈಕೆಯಾಗಬೇಕು. ಪಟ್ಟಣ ಪಂಚಾಯಿತಿಯ ವರಮಾನ ಹೆಚ್ಚಿಸಲು ಸೂಕ್ತ ಯೋಜನೆಯನ್ನು ರೂಪಿಸಬೇಕೆಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಸೂಚಿಸಿದರು.

ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನಲ್ಲಿರುವ ಎಲ್ಲ ಶಾಲೆಗಳಲ್ಲಿ ಕನ್ನಡ ಬೋಧಿಸುವ ವ್ಯವಸ್ಥೆಯಾಗಬೇಕು. ಇದಕ್ಕಾಗಿ ಅಗತ್ಯ ಶಿಕ್ಷಕರನ್ನು ನಿಯೋಜಿಸಬೇಕು. ಕೆಲವು ಶಾಲೆಗಳಲ್ಲಿ 6 ಮತ್ತು 7ನೇ ಮಕ್ಕಳಿಗೆ ಸರಿಯಾಗಿ ಓದಲು ಮತ್ತು ಬರೆಯಲು ಬಾರದಿರುವುದು ಗಮನಕ್ಕೆ ಬಂದಿದೆ. ಇದು ಸರಿಪಡಿಸಬೇಕು. ಶಿಕ್ಷಣದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದೆ. ಶಾಲಾ ಕಟ್ಟಡಗಳ ನಿರ್ಮಾಣ, ಮೂಲ ಸೌಕರ್ಯಗಳ ಒದಗಿಸಲು ಬೇಕಾದಷ್ಟು ಅನುದಾನ ಕೊಡಲು ನಾನು ಸಿದ್ಧನಿದ್ದೇನೆ. ಆದರೆ ಗುಣಮಟ್ಟದ ಶಿಕ್ಷಣ ಕೊಡಬೇಕು. ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕೆಂದು ಶಾಸಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು.

ಔರಾದ್‌ನಲ್ಲಿ ಜೆಜೆಎಂ ಯೋಜನೆ ವಿಫಲ: ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ಜಲ ಜೀವನ್ ಮಿಷನ್ ಯೋಜನೆಯಡಿ ಸುಮಾರು 200 ಕೋಟಿ ಅನುದಾನ ತಂದು ಎಲ್ಲ ಗ್ರಾಮಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಅಧಿಕಾರಿಗಳ ಕಾರಣದಿಂದಾಗಿ ಯೋಜನೆ ಸಂಪೂರ್ಣ ವಿಫಲಗೊಂಡಿದೆ ಎಂದು ಬೇಸರ ಹೊರಹಾಕಿದರು.

ಯೋಜನೆ ಪೂರ್ಣಗೊಂಡ ಬಹಳಷ್ಟು ಗ್ರಾಮಗಳಲ್ಲಿ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಪೈಪ್‌ ಲೈನ್ ಕೆಲಸಕ್ಕೆ ಅಗೆದ ಗುಂಡಿಗಳನ್ನು ಸರಿಪಡಿಸಿಲ್ಲ. ಕೆಲವೆಡೆ ಜಲಮೂಲಗಳು ಇಲ್ಲದೇ ಕೆಲಸ ಮಾಡಲಾಗಿದೆ. ಇದರಿಂದ ಕೆಲಸವಾದರೂ ನೀರು ಸಿಗದ ಪರಿಸ್ಥಿತಿಯಿದೆ. ಗ್ರಾಮ ಸಂಚಾರದ ಸಂದರ್ಭದಲ್ಲಿ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಕುರಿತ ದೂರುಗಳು ಬರುತ್ತಿವೆ. ಸರಿಯಾಗಿ ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಅನೇಕ ಸಲ ಹೇಳಿದರು ನಿರ್ಲಕ್ಷö್ಯ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುಭಾಷ ಅವರನ್ನು ಎಚ್ಚರಿಸಿದರು.

ಪಿಡಿಓಗಳು ಜೆಜೆಎಂ ಯೋಜನೆಯಡಿ ಮನೆ-ಮನೆಗೆ ಭೇಟಿ ನೀಡಿ ನೀರು ಬರುತ್ತಿರುವ ಬಗ್ಗೆ ಖಚಿತವಾದ ನಂತರವೇ ಕಾಮಗಾರಿ ಅಧಿನಕ್ಕೆ ಪಡೆಯಬೇಕು. ಈ ಬಗ್ಗೆ ಎಲ್ಲ ಪಿಡಿಓಗಳಿಗೆ ಸ್ಪಷ್ಟ ಸೂಚನೆ ನೀಡಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ಯೋಜನೆಯ ಬಗ್ಗೆ ಜನರಲ್ಲಿ ವ್ಯಾಪಕ ಆಕ್ರೋಶವಿದೆ. ಇನ್ನು ಮುಂದೆ ಸುಮ್ಮನಿರುವುದಿಲ್ಲವೆಂದು ತಿಳಿಸಿದರು.

ಈ ವೇಳೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ, ಆರೋಗ್ಯ, ಪಂಚಾಯತ್ ರಾಜ್, ಜೆಸ್ಕಾಂ, ತೋಟಗಾರಿಕೆ, ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷರಾದ ಧೊಂಡಿಬಾ ನರೋಟೆ, ಔರಾದ(ಬಿ) ತಾಪಂ ಇಓ ಬೀರೇಂದ್ರಸಿಂಗ್ ಠಾಕೂರ್, ಕಮಲನಗರ ಇಓ ಮಾಣಿಕರಾವ ಪಾಟೀಲ, ಔರಾದ(ಬಿ) ತಹಸೀಲ್ದಾರ ಮಲಶೆಟ್ಟಿ ಚಿದ್ರೆ, ಕಲನಗರ ತಹಸೀಲ್ದಾರ ಅಮಿತಕುಮಾರ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ