ಶಾಲಾ ಮುಂಭಾಗ ಘೋಷಣೆ ಕೂಗಿ ಗೂಂಡಾಗಿರಿ ಮೆರೆದ ಶಾಸಕ ವೇದವ್ಯಾಸ ಕಾಮತ್ ನಡೆ ಖಂಡನೀಯ: ಸಿಪಿಐಎಂ - Mahanayaka

ಶಾಲಾ ಮುಂಭಾಗ ಘೋಷಣೆ ಕೂಗಿ ಗೂಂಡಾಗಿರಿ ಮೆರೆದ ಶಾಸಕ ವೇದವ್ಯಾಸ ಕಾಮತ್ ನಡೆ ಖಂಡನೀಯ: ಸಿಪಿಐಎಂ

vedavyas kamath
13/02/2024

ಮಂಗಳೂರು:  ನಗರ ಜೆರೋಸಾ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮವನ್ನು ಮತ್ತು ದೇವರನ್ನು ಅವಹೇಳನಕರವಾಗಿ ಬೋಧಿಸಿದ್ದಾರೆಂದು ಆರೋಪಿಸಿ ಪೋಷಕರು ನೀಡಿದ ದೂರುಗಳನ್ನಾದರಿಸಿ ಸಮಗ್ರವಾದ ತನಿಖೆ ನಡೆಸುವ ಮತ್ತು ಕಾನೂನಿನಡಿಯಲ್ಲಿ ನ್ಯಾಯ ತೆಗೆಸಿಕೊಡಬೇಕಾಗಿದ್ದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತರು ಸರಕಾರಿ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಅದೇ ಶಾಲಾ ಮಕ್ಕಳನ್ನು ಮತ್ತು ಪೋಷಕರನ್ನು ಸೇರಿಸಿ ಶಾಲಾ ಮುಂಭಾಗ ಘೋಷಣೆಯನ್ನು ಕೂಗಿದ್ದಲ್ಲದೆ, ಗುಂಡಾಗಿರಿ ನಡೆಸಿದ ಕ್ರಮವನ್ನು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಖಂಡಿಸಿದ್ದು, ಶಾಸಕರ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ.

ಶಾಸಕ ವೇದವ್ಯಾಸ‌ ಕಾಮತ್ ಮತ್ತು ಸಂಘಪರಿವಾರ ಕ್ರೈಸ್ತ ಮಿಷನರಿ ಶಾಲಾ ಶಿಕ್ಷಕಿ ಆ ರೀತಿ ಬೋಧನೆ ಮಾಡಿದ‌ ನೆಪವನ್ನು  ಮುಂದಿಟ್ಟುಕೊಂಡು ಚುನಾವಣಾ ರಾಜಕೀಯ ನಡೆಸುತ್ತಿರುವುದು ಮೇಲ್ನೋಟಕ್ಕೆ ಬಲವಾಗಿ ಎದ್ದು ಕಾಣುತ್ತಿದೆ. ಇಲ್ಲಿ ಶಾಸಕರಿಗೆ ಶಾಲಾ ಮಕ್ಕಳ ಮೇಲಾಗಲಿ ಪೋಷಕರ ಮೇಲಾಗಲಿ ಯಾವುದೇ ಕಾಳಜಿಗಳು ಕಾಣುತ್ತಿಲ್ಲ. ಒಂದು ವೇಳೆ ಕಾಳಜಿ ಇರುತ್ತಿದ್ದರೆ ತಾನೊಬ್ಬ ಶಾಸಕನೆಂದು ಮರೆತು ಮಕ್ಕಳನ್ನು ಮತ್ತು ಪೋಷಕರನ್ನು ಒಟ್ಟು ಸೇರಿಸಿ ಶಾಲಾ ಆವರಣ ಮುಂಭಾಗ ಗೂಂಡಾಗಿರಿ ಮೆರೆಯುವ ಅಗತ್ಯತೆ ಇರಲಿಲ್ಲ ಎಂದು ಸಿಪಿಐಎಂ ಹೇಳಿದೆ.

ಶಾಲಾ ಮಂಡಳಿ ಮತ್ತು ಪೋಷಕರ ನಡುವೆ ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ನೆಲದ ಕಾನೂನಿನಡಿಯಲ್ಲಿ ಕನಿಷ್ಠ ನ್ಯಾಯ ತೆಗೆಸಿಕೊಡುವ ಜವಾಬ್ದಾರಿ ವಹಿಸಿಕೊಳ್ಳಬೇಕಿತ್ತು. ಇವರಿಗೆ ನಿಜವಾಗಿ ಹಿಂದೂ ಧರ್ಮದ ಮಕ್ಕಳ ಮೇಲೆ ಕಾಳಜಿ ಇರುತ್ತಿದ್ದರೆ , ಶಾಸಕರಾಗಿದ್ದುಕೊಂಡು ತಮ್ಮ ಸರಕಾದ ಅವಧಿಯಲ್ಲಾಗಲಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಲು ಸಾಧ್ಯವಾಗಲೇ ಇಲ್ಲ. ಇನ್ನು ಸರಕಾರಿ ಶಾಲೆಯಲ್ಲಿ ಕಲಿಸುತ್ತಿರುವಂತಹ ಅಥಿತಿ ಶಿಕ್ಷಕರು ಕಳೆದ ಮೂರು ತಿಂಗಳುಗಳಿಂದ ವೇತನ ಪಡೆಯದೆ ಸಂಕಷ್ಟ ಎದುರಿಸುತ್ತಿದ್ದಾರೆ ಮಾತ್ರವಲ್ಲ ಸೇವಾ ಭದ್ರತೆ ಇಲ್ಲದೆ ಉದ್ಯೋಗ ಕಳೆದುಕೊಳ್ಳುವ ಆತಂಕದಿಂದ ದಿನದೂಡುತ್ತಿದ್ದಾರೆ. ಈ ಬಗ್ಗೆ ಒಂದು ದಿನವೂ ಶಾಸಕ ವೇದವ್ಯಾಸ ಕಾಮತರು ವಿಧಾನಸಭೆಯಲ್ಲಿ ಮಾತಾಡಲೇ ಇಲ್ಲ, ಕನಿಷ್ಟ ಯಾವುದೇ ಸರಕಾರಿ ಶಾಲೆಗಳ ಎದುರು ವೀರಾವೇಷದ ಘೋಷಣೆ ಕೂಗಿ ಹೋರಾಟನೂ ಮಾಡಲಿಲ್ಲ. ಇಂತಹ ಪ್ರಶ್ನೆಗಳ ಬಗ್ಗೆ ಮಾತನಾಡದ ಶಾಸಕರು ಹಿಂದು ಧರ್ಮ ಬಗ್ಗೆ ಅವಹೇಳನಕರ ಭೋದಿಸಿದ್ದಾರೆಂಬ ಆರೋಪದ ಕುರಿತು ಸತ್ಯಾಸತ್ಯತೆಯನ್ನು ತಿಳಿಯದೆ ,  ಸಮಗ್ರ ತನಿಖೆಗೂ ಆಗ್ರಹಿಸದೆ ಈ ರೀತಿ ಶಾಲಾ ಕಚೇರಿ ಎದುರು ಗೂಂಡಾಗಿರಿ ಪ್ರದರ್ಶಿಸುವ ನೈತಿಕತೆ ಇದೆಯೇ ? ಎಂದು ಸಿಪಿಐಎಂ ಪ್ರಶ್ನಿಸಿದೆ.


Provided by

ಇಷ್ಟೆಲ್ಲಾ ಘಟನೆಗಳು ನಡೆಯುತ್ತಿರುವಾಗಲೂ ಕಾಂಗ್ರೆಸ್ ಸರಕಾರ ಕನಿಷ್ಟ ಕೂಡಲೇ ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗದೇ, ಈ ರೀತಿ ಶಾಲಾ ಆವರಣ ಮುಂಭಾಗ ಅಕ್ರಮಕೂಟ ಸೇರಿಸಿ ಗೂಂಡಾಗಿರಿ ಮೆರೆದ ಶಾಸಕ ವೇದವ್ಯಾಸನ ಮೇಲೂ ಕ್ರಮಕೈಗೊಳ್ಳದೆ ಇರೋದು ನಾಚಿಕೆಗೇಡಿನ ಸಂಗತಿ ಎಂದು ಸಿಪಿಐಎಂ ನ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಇತ್ತೀಚಿನ ಸುದ್ದಿ