ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಟಿಕೆಟ್ ‌ನಿರಾಕರಣೆಗೊಂಡ‌‌ ಶಾಸಕರು - Mahanayaka
8:01 PM Wednesday 11 - December 2024

ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಟಿಕೆಟ್ ‌ನಿರಾಕರಣೆಗೊಂಡ‌‌ ಶಾಸಕರು

bjp
13/04/2023

ಬಿಜೆಪಿ ಪಕ್ಷವು ಬುಧವಾರ ತಡರಾತ್ರಿ 23 ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಆರು ಜನ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅವರ ವಿವರ ಇಲ್ಲಿದೆ.

ಮೂಡಿಗೆರೆ: ಎಂ.ಪಿ ಕುಮಾರಸ್ವಾಮಿ

ಮೂಡಿಗೆರೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ದೀಪಕ್‌ ದೊಡ್ಡಯ್ಯನವರಿಗೆ ಸಿಕ್ಕಿದೆ. 1999ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಪಿ ಕುಮಾರಸ್ವಾಮಿಯವರು ಕಾಂಗ್ರೆಸ್‌ ನ ಮೋಟಮ್ಮನವರ ಎದುರು ಸೋತಿದ್ದರು. ಆನಂತರ 2004 ಮತ್ತು 2008ರಲ್ಲಿ ಮೋಟಮ್ಮ ಮತ್ತು ಚಂದ್ರಪ್ಪನವರ ಎದುರು ಗೆಲುವು ಸಾಧಿಸಿದ್ದರು. 2013ರಲ್ಲಿ ಜೆಡಿಎಸ್‌ ನ ಬಿ.ಬಿ.ನಿಂಗಯ್ಯನವರು ಎದುರು ಸೋಲು ಕಂಡಿದ್ದರು. ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೋಟಮ್ಮನವರು ಎದುರು 12,328 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸದ್ಯ ಎಂ.ಪಿ. ಕುಮಾರಸ್ವಾಮಿಯವರು ಜೆಡಿಎಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಚನ್ನಗಿರಿ: ಮಾಡಾಳ್ ವಿರೂಪಾಕ್ಷಪ್ಪ

ಇತ್ತೀಚಿಗೆ ಭಾರೀ ಭ್ರಷ್ಟಾಚಾರ ನಡೆಸಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಮಾಡಾಳ್ ವಿರೂಪಾಕ್ಷಪ್ಪನವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ. ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ತಮಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ತುಮ್ಕೋಸ್ ಮಾಜಿ ಅಧ್ಯಕ್ಷ ಶಿವಕುಮಾರ್‌ ರವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ.

ಬೈಂದೂರು: ಸುಕುಮಾರ ಶೆಟ್ಟಿ

ಬೈಂದೂರಿನಲ್ಲಿ 2013ರಲ್ಲಿ ಸೋತು 2018ರಲ್ಲಿ ಗೆಲುವು ಸಾಧಿಸಿದ್ದ ಸುಕಮಾರ ಶೆಟ್ಟಿಯವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ. ಅವರ ಬದಲಿಗೆ ಗುರುರಾಜ್‌ ಗಂಟೀಹೊಳೆಗೆ ಬಿಜೆಪಿ ಟಿಕೆಟ್ ಲಭಿಸಿದೆ.

ಕಲಘಟಗಿ: ಸಿ.ಎಂ.ನಿಂಬಣ್ಣನವರ್

2008ರಲ್ಲಿ ಬಿಜೆಪಿಯಿಂದ ಮತ್ತು 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಸಂತೋಷ್ ಲಾಡ್ ವಿರುದ್ಧ ಸೋತಿದ್ದ ಸಿ.ಎಂ.ನಿಂಬಣ್ಣನವರ್ 2018ರಲ್ಲಿ ಸಂತೋಷ್ ಲಾಡ್‌ರನ್ನು 25,997 ಮತಗಳ ಅಂತರದಲ್ಲಿ ಸೋಲಿಸಿ ಶಾಸಕರಾಗಿದ್ದರು. ಆದರೆ ಒಂದೇ ಬಾರಿಗೆ ಶಾಸಕರಾಗಿದ್ದು ಸಾಕು ಎಂದಿರುವ ಬಿಜೆಪಿ ಹೈಕಮಾಂಡ್ ಅವರಿಗೆ ಟಿಕೆಟ್ ನಿರಾಕರಿಸಿ, ನಾಗರಾಜ್‌ ಛಬ್ಬಿಯವರಿಗೆ ಮಣೆ ಹಾಕಿದೆ. ಕಾಂಗ್ರೆಸ್‌ನಿಂದ ಈ ಬಾರಿಯೂ ಸಂತೋಷ್ ಲಾಡ್ ಅಭ್ಯರ್ಥಿಯಾಗಿದ್ದಾರೆ.

ಹಾವೇರಿ: ನೆಹರೂ ಓಲೇಕಾರ್‌

ಓಲೇಕಾರ್ 2008 ಮತ್ತು 2018ರಲ್ಲಿ ಹಾವೇರಿ ಶಾಸಕರಾಗಿದ್ದರು. ಆದರೆ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತ ಪ್ರಕರಣದಲ್ಲಿ ಹಾವೇರಿ ಬಿಜೆಪಿ ಶಾಸಕ ನೆಹರು ಓಲೆಕಾರ್‌ಗೆ 2023ರ ಫೆಬ್ರುವರಿಯಲ್ಲಿ ಜನಪ್ರತಿನಿಧಿಗಳ ವಿಶೇ‍ಷ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆ ಕಾರಣದಿಂದ ಅವರಿಗೆ ಈ ಬಾರಿಯ ಬಿಜೆಪಿ ಟಿಕೆಟ್ ಸಿಕ್ಕಿಲ್ಲ. ಅವರ ಬದಲಿಗೆ ಗವಿಸಿದ್ದಪ್ಪ ದ್ಯಾಮಣ್ಣನವರ್‌ ನವರಿಗೆ ಬಿಜೆಪಿ ಟಿಕೆಟ್ ಒಲಿದಿದೆ.

ಮಾಯಕೊಂಡ: ಪ್ರೊ.ಲಿಂಗಣ್ಣ

ಪ್ರೊ.ಎನ್ ಲಿಂಗಣ್ಣ 2018ರಲ್ಲಿ ಕಾಂಗ್ರೆಸ್‌ನ ಕೆ.ಎಸ್ ಬಸವರಾಜುರವರನ್ನು 6,458 ಮತಗಳ ಅಂತರದಲ್ಲಿ ಸೋಲಿಸಿ ಶಾಸಕರಾಗಿದ್ದರು. ಈಗ ಬಿಜೆಪಿ ಅವರ ಬದಲಿಗೆ ಬಸವರಾಜ ನಾಯಕ್‌ರವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಮತ್ತೆ ಕೆ.ಎಸ್ ಬಸವರಾಜುರವರನ್ನು ಕಣಕ್ಕಿಳಿಸಿದೆ. ಬಿಜೆಪಿಯ ಮೊದಲ ಪಟ್ಟಿಯಲ್ಲಿ 10 ಜನ ಹಾಲಿ ಶಾಸಕರಿಗೆ ಟಿಕೆಟ್ ನೀಡಿರಲಿಲ್ಲ.

ಟಿಕೆಟ್ ತಪ್ಪಿದವರಿಂದ ರಾಜಕೀಯ ನಿವೃತ್ತಿ!

ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಲಕ್ಷ್ಮಣ್ ಸವದಿ ಬಿಜೆಪಿ ತೊರೆದಿದ್ದಾರೆ. ಜಗದೀಶ್ ಶೆಟ್ಟರ್ ಬಂಡಾಯ ಸ್ಪರ್ಧೆ ಸುಳಿವು ನೀಡಿದ್ದಾರೆ. ಗೂಳಿಹಟ್ಟಿ ಶೇಖರ್ ಬಂಡಾಯ ಅಭ್ಯರ್ಥಿಯಾಗುವುದಾಗಿ ಘೋಷಿಸಿದ್ದಾರೆ. ಸುಳ್ಯ ಕ್ಷೇತ್ರದ ಶಾಸಕರೂ ಆಗಿರುವ ಮೀನುಗಾರಿಕಾ ಸಚಿವ ಎಸ್‌.ಅಂಗಾರ ಅವರಿಗೆ ಟಿಕೆಟ್ ಸಿಗದಿರುವ ಕಾರಣಕ್ಕೆ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಉಡುಪಿ ಟಿಕೆಟ್ ಸಿಗದ ರಘುಪತಿ ಭಟ್ ಕಣ್ಣೀರು ಹಾಕಿದ್ದಾರೆ. ನಿನ್ನೆಯೇ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ತುಮಕೂರು ನಗರದ ಸೊಗಡು ಶಿವಣ್ಣ ಬಿಜೆಪಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಕುಣಿಗಲ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮುದ್ದಹನುಮೇಗೌಡ ಮತ್ತು ರಾಜೇಶ್ ಗೌಡ ಕೂಡ ಬಂಡಾಯದ ಬಾವುಟ ಹಾರಿಸಿದ್ದಾರೆ.

ಜೇವರ್ಗಿಯ ದೊಡ್ಡಪ್ಪಗೌಡ ಪಾಟೀಲ್ ಬಿಜೆಪಿ ತೊರೆದು ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಮಾಲೂರಿನಲ್ಲಿ ಹೂಡಿ ವಿಜಯ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಲಿದ್ದಾರೆ. ಅವರ ಸಾಲಿಗೆ ಎಂ.ಪಿ ಕುಮಾರಸ್ವಾಮಿ ಸೇರಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ