ಮೊದಲ ರಾತ್ರಿಯಲ್ಲಿ ರಕ್ತ ಸ್ರಾವವಾಗಲಿಲ್ಲ ಎಂದು ಪತ್ನಿ, ಪತ್ನಿಯ ಸಹೋದರಿಯನ್ನು ಹೊರದಬ್ಬಿದ!
ಕೊಲ್ಹಾಪುರ: ಮೊದಲ ರಾತ್ರಿಯಂದು ರಕ್ತಸ್ರಾವವಾಗಲಿಲ್ಲ ಎನ್ನುವ ಕಾರಣಕ್ಕೆ ಪತ್ನಿ ಹಾಗೂ ಆಕೆಯ ತಂಗಿಯನ್ನು ಮನೆಯಿಂದ ಹೊರ ದಬ್ಬಿ, 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟ ಘಟನೆಯೊಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.
ನವೆಂಬರ್ 27ರಂದು ಸಹೋದರಿಯರಿಬ್ಬರನ್ನು ಒಂದೇ ಮನೆಯ ಅಣ್ಣ ತಮ್ಮಂದಿರಿಗೆ ಮದುವೆ ಮಾಡಿಕೊಡಲಾಗಿತ್ತು. ಮೊದಲ ರಾತ್ರಿಯಂದು, ಯುವತಿಯರು ಕನ್ಯೆಯರೇ ಎಂದು ಪರೀಕ್ಷಿಸಲು ಮನೆಯವರು ಬೆಡ್ ಮೇಲೆ ಬಿಳಿ ಬಟ್ಟೆ ಹಾಸಿದ್ದರು. ಆದರೆ ಸಹೋದರಿಯರ ಪೈಕಿ ಅಕ್ಕನ ಬೆಡ್ ನಲ್ಲಿ ರಕ್ತ ಸ್ರಾವದ ಕಲೆಗಳು ಕಂಡು ಬರಲಿಲ್ಲ ಎನ್ನುವ ಕಾರಣಕ್ಕೆ ಮನೆಯವರು ರಾದ್ಧಾಂತ ಎಬ್ಬಿಸಿದ್ದು, ಆಕೆ ನಡತೆಗೆಟ್ಟವಳು ಎಂದು ಮನೆಯವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಅಕ್ಕ ನಡತೆಗೆಟ್ಟವಳು ಹಾಗಾಗಿ ಆಕೆಯ ತಂಗಿ ಕೂಡ ಇರಬಾರದು ಎಂದು ಇಬ್ಬರನ್ನು ಕೂಡ ಮನೆಯೊಂದ ಹೊರ ಹಾಕಿದ್ದಾರೆ. ಇದರ ಜೊತೆಗೆ 10 ಲಕ್ಷ ರೂಪಾಯಿ ನೀಡಬೇಕು ಎಂದು ಯುವತಿಯ ಮನೆಯವರಿಗೆ ಬೆದರಿಕೆ ಹಾಕಿದ್ದಾರೆ. ತಮಗೆ ನ್ಯಾಯ ಕೊಡಿಸಿ ಎಂದು ಪಂಚಾಯಿತಿಗೆ ಹೋದರೆ, ಅವರು ಸಹೋದರಿಯರ ಪಾಲಕರಿಂದ 40 ಸಾವಿರ ರೂಪಾಯಿ ವಸೂಲಿ ಮಾಡಿಕೊಂಡು ಡಿವೋರ್ಸ್ ಕೊಡಿಸಿದ್ದಾರೆ. ಇದೆಲ್ಲದರಿಂದ ಬೇಸತ್ತ ಪಾಲಕರು ಇದೀಗ ಪೊಲೀಸರ ಮೊರೆ ಹೋಗಿದ್ದು, ಇದರಿಂದಾಗಿ ಘಟನೆ ಬೆಳಕಿಗೆ ಬಂದಿದೆ.
ಏನಿದು ಕನ್ಯತ್ವ?
ಮೊದಲ ಬಾರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಯುವತಿಯರಿಗೆ ಕನ್ಯಾಪೊರೆ ಹರಿಯುವ ಕಾರಣದಿಂದಾಗಿ ರಕ್ತ ಸ್ರಾವವಾಗುತ್ತದೆ. ಆದರೆ ಇದು ಎಲ್ಲರಲ್ಲಿಯೂ ಆಗುವುದಿಲ್ಲ. ಯಾಕೆಂದರೆ, ಕಠಿಣ ಕೆಲಸಗಳನ್ನು ಮಾಡುವವರು, ದೈಹಿಕ ಶ್ರಮದಿಂದ ಕೆಲಸ ಮಾಡುವವರು, ದೇಹವನ್ನು ದಂಡಿಸುವ ಯುವತಿಯರ ಕನ್ಯಾಪೊರೆ ಆಕಸ್ಮಿಕವಾಗಿ ಹರಿದುಹೋಗಬಹುದು. ಆದರೆ ಭಾರತದಲ್ಲಿ ಲೈಂಗಿಕ ಶಿಕ್ಷಣವೇ ಇಲ್ಲದ ಜನರು ಇದನ್ನು ಪವಿತ್ರ ಅಪವಿತ್ರದ ದೃಷ್ಟಿಯಲ್ಲಿ ನೋಡುತ್ತಿದ್ದಾರೆ.
ಮನೆಗೆ ಬರುವ ವಧುವನ್ನು ಸಂತೋಷದಿಂದ ಸ್ವೀಕರಿಸುವ ಬದಲು ಆಕೆಯ ಬೆಡ್ ಮೇಲೆ ಬಿಳಿ ಬಣ್ಣದ ಬಟ್ಟೆಯನ್ನು ಹಾಕುತ್ತಾರೆ. ಇಲ್ಲವಾದರೆ, ಆಕೆಯ ಪತಿಗೆ ಬಿಳಿಯ ಪಂಚೆ ಉಟ್ಟು ಮೊದಲ ರಾತ್ರಿಗೆ ಕಳುಹಿಸುತ್ತಾರೆ. ಇಂತಹದ್ದೆಲ್ಲ ವಿಕೃತಿಗಳನ್ನೂ ಕೆಲವರು ಇದು ನಮ್ಮ ಸಂಪ್ರದಾಯ ಎನ್ನುತ್ತಿದ್ದಾರೆ.