“ಮೋದಿ ಚಾಯ್” ಅಂಗಡಿ ಮಾಲಿಕನ ತಲೆಗೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ
ಲಕ್ನೋ: ಮೋದಿ ಚಾಯ್ ಅಂಗಡಿಯ ಮಾಲಿಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಕೊಲೆಗೆ ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ಬಲರಾಮ್ ಸಂಚನ್ ಹತ್ಯೆಗೀಡಾದ ವೃದ್ಧನಾಗಿದ್ದು, ಇವರು ಕಾನ್ಪುರ ಘತಂಪುರ ಕೊಟ್ಟಾಲಿಯ ಜಹನ್ ಬಾದ್ ರಸ್ತೆಯ ಬಳಿ ಚಹಾದ ಅಂಗಡಿ ತೆರೆದಿದ್ದು, ಈ ಅಂಗಡಿಗೆ ಮೋದಿ ಚಾಯ್ ಎಂದು ಹೆಸರಿಟ್ಟಿದ್ದರು.
ಹಗಲೆಲ್ಲ ಚಹಾ ಮಾರಿ ರಾತ್ರಿ ವೇಳೆ ಅಂಗಡಿಯಲ್ಲಿಯೇ ಬಲರಾಮ್ ಮಲಗುತ್ತಿದ್ದ ಎಂದು ಹೇಳಲಾಗಿದೆ. ಈತನ ಅಂಗಡಿಗೆ ಸಮೀಪದಲ್ಲಿಯೇ ಇರುವ ರೆಸಾರ್ಟ್ ವೊಂದರಲ್ಲಿ ರಾತ್ರಿ ಅಖಂಡ ರಾಮಾಯಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಲರಾಮ್ ಕೂಡ ಭಾಗವಹಿಸಿ, ಹಾಡಿದ್ದರು ಎಂದು ಹೇಳಲಾಗಿದೆ.
ಇದಾದ ಬಳಿಕ ರಾತ್ರಿ ಮಲಗಿದ್ದ ವೇಳೆ ದುಷ್ಕರ್ಮಿಗಳು ಇವರ ತಲೆಗೆ ಇಟ್ಟಿಗೆ ಎತ್ತಿಹಾಕಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಕೊಲೆಗೆ ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.