ದೇಶದಲ್ಲೇ ಮೊದಲ ಬಾರಿಗೆ ಪತ್ತೆಯಾಯ್ತು ಝಿಕಾ ವೈರಸ್: ಸೊಳ್ಳೆಗಳಿಂದ ಹರಡುವ ಈ ವೈರಸ್ ನ ಲಕ್ಷಣಗಳೇನು ಗೊತ್ತಾ?
ತಿರುವನಂತಪುರಂ: ದೇಶಾದ್ಯಂತ ಕೊರೊನಾ ವೈರಸ್ ನಾನಾ ರೂಪಗಳಿಂದ ಜನರಿಗೆ ಆತಂಕವನ್ನುಂಟು ಮಾಡಿದ್ದರೆ, ಇತ್ತ ಕೇರಳದಲ್ಲಿ ಝಿಕಾ ವೈರಸ್ ಭೀತಿ ಸೃಷ್ಟಿಸಿದ್ದು, ಕೇರಳದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ.
ಕೇರಳದಲ್ಲಿ ಝಿಕಾ ವೈರಸ್ ಸೋಂಕಿನ ಸುಮಾರು 10 ಪ್ರಕರಣಗಳು ದೃಢವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದು, 24 ವರ್ಷದ ಮಹಿಳೆಯೊಬ್ಬರಲ್ಲಿ ಈ ಸೋಂಕು ಮೊದಲು ಪತ್ತೆಯಾಗಿತ್ತು, ಅವರಿಗೆ ಇತ್ತೀಚೆಗೆ ಹೆರಿಗೆಯಾಗಿತ್ತು. ಜೂನ್ 28ರಂದು ಈ ಮಹಿಳೆ ಜ್ವರ, ತಲೆ ನೋವು ಹಾಗೂ ಕೆಂಪು ಕಲೆಗಳ ಕಾರಣವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ಈ ವೈರಸ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಮಹಿಳೆ ಮಾತ್ರವಲ್ಲದೇ, ಈ ಸೋಂಕಿನ ಲಕ್ಷಣಗಳಿದ್ದ ಹದಿಮೂರು ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಣು ಪತ್ತೆ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಹತ್ತು ಮಾದರಿಗಳು ಪಾಸಿಟಿವ್ ಬಂದಿದೆ ವಿಣಾ ಜಾರ್ಜ್ ತಿಳಿಸಿದ್ದಾರೆ.
ಝಿಕಾ ವೈರಸ್ ಸೊಳ್ಳೆಗಳಿಂದ ಹರಡುವ ರೋಗವಾಗಿದ್ದು, ಜ್ವರ, ಕೆಂಪು ಕಲೆಗಳು, ಸ್ನಾಯು, ಕೀಲುಗಳಲ್ಲಿ ನೋವು, ತಲೆ ನೋವು ಈ ಸೋಂಕಿನ ಪ್ರಮುಖ ಲಕ್ಷಣಗಳನ್ನು ಇದು ಹೊಂದಿದೆ ಎಂದು ತಿಳಿದು ಬಂದಿದೆ.
ವಿಶ್ವ ಆರೋಗ್ಯ ಸಂಸ್ಥೆ 1947ರಲ್ಲಿ ಉಗಾಂಡದಲ್ಲಿ ಮಂಗಗಳಲ್ಲಿ ಪತ್ತೆಹಚ್ಚಿತ್ತು. ಆಫ್ರಿಕಾ, ಅಮೆರಿಕ, ಏಷ್ಯಾ ಹಾಗೂ ಪೆಸಿಫಿಕ್‌ನಲ್ಲಿ ಕಂಡುಬಂದಿದ್ದು, ಇದೀಗ ಮೊದಲ ಬಾರಿ ಕೇರಳದಲ್ಲಿ ಪತ್ತೆಯಾಗಿದೆ.
ಈ ಸೋಂಕಿನಿಂದ ಸಾವು ಸಂಭವಿಸುವ ಅಪಾಯ ಕಡಿಮೆ ಇದ್ದರೂ, ಗರ್ಭಿಣಿಯರಲ್ಲಿ ಈ ರೋಗ ಕಾಣಿಸಿಕೊಂಡರೆ ಹುಟ್ಟುವ ಮಕ್ಕಳಿಗೆ ತೊಂದರೆಗಳು ಕಂಡು ಬರುತ್ತವೆ ಎಂದು ಡಬ್ಲುಎಚ್‌ಒ ತಿಳಿಸಿದೆ.