ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ– ಮಗಳು
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ತಾಯಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ಅಪರೂಪದ ಫಲಿತಾಂಶಕ್ಕೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಸಾಕ್ಷಿಯಾಗಿದೆ.
ಯೆಸ್. ಪ್ರಸಕ್ತ ಸಾಲಿಗೆ ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಫಲಿತಾಂಶವು ಪ್ರಕಟಗೊಂಡಿದ್ದು, ದ.ಕ.ಜಿಲ್ಲೆಯು ಸತತ ನಾಲ್ಕನೇ ಬಾರಿಗೆ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿವೆ. ದ.ಕ.ಜಿಲ್ಲೆಯು ಕಳೆದ ಬಾರಿ ಶೇ.88.02ನೊಂದಿಗೆ ಪ್ರಥಮ ಸ್ಥಾನಿಯಾಗಿದ್ದರೆ, ಈ ಬಾರಿ ಶೇ.95.33 ಫಲಿತಾಂಶ ದಾಖಲಿಸಿ ಪ್ರಥಮ ಸ್ಥಾನದಲ್ಲೇ ಗುರುತಿಸಿಕೊಂಡಿವೆ. ಜಿಲ್ಲೆಯ 34,069 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ 31,501 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಪೈಕಿ 15,340 ಬಾಲಕರು ಮತ್ತು 16,161 ಬಾಲಕಿಯರಿದ್ದಾರೆ. ಜಿಲ್ಲೆಯ ವಿಜ್ಞಾನ ವಿಭಾಗದಲ್ಲಿ ಇಬ್ಬರು ತೃತೀಯ, ವಾಣಿಜ್ಯ ವಿಭಾಗದ ಒಬ್ಬರು ಪ್ರಥಮ ಹಾಗೂ ಮೂವರು ದ್ವಿತೀಯ ಮತ್ತು ಇಬ್ಬರು ತೃತೀಯ, ಕಲಾ ವಿಭಾಗದ ಒಬ್ಬರು ತೃತೀಯ ಸ್ಥಾನ ಪಡೆಯುವುದರೊಂದಿಗೆ 9 ಮಂದಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಇದ್ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಜಯನಗರದ ರಮೇಶ್ ಎಂಬುವವರ ಪತ್ನಿ ಗೀತಾ ಮತ್ತು ಅವರ ಪುತ್ರಿ ತ್ರಿಷಾ ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ ಮತ್ತು ಮಗಳು. ಸುಳ್ಯ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿರುವ ಗೀತಾ ವೃತ್ತಿ ಜೀವನದ ಮಧ್ಯೆ ಅಧ್ಯಯನ ನಡೆಸಿ ಖಾಸಗಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದು 45ನೇ ವರ್ಷದಲ್ಲಿ ಉತ್ತೀರ್ಣರಾಗಿದ್ದಾರೆ. ಮಗಳು ತೃಷಾ ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. 25 ವರ್ಷದ ಹಿಂದೆ ಗೀತಾ ಅವರ ಹೈಸ್ಕೂಲ್ ವಿದ್ಯಾಭ್ಯಾಸ ಮೊಟಕುಗೊಂಡಿತ್ತು. ಎರಡು ವರ್ಷಗಳ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣಗೊಂಡಿದ್ದರು.
ಈ ವರ್ಷ ಪಿಯುಸಿ ಪರೀಕ್ಷೆಯನ್ನು ಸುಳ್ಯದ ಗಾಂಧಿನಗರ ಕಾಲೇಜಿನಲ್ಲಿ ಪರೀಕ್ಷೆ ಕಟ್ಟಿ, ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದರು. ಗೃಹ ರಕ್ಷಕ ದಳದ ಸಿಬ್ಬಂದಿಯಾಗಿರುವ ಇವರು ಕರ್ತವ್ಯ, ಮನೆಗೆಲಸದ ಬಿಡುವಿನ ವೇಳೆ ಅಭ್ಯಾಸ ನಡೆಸಿದ್ದಾರೆ. ಅಲ್ಲದೆ ಇವರ ಕಲಿಕೆಗೆ ಪೂರಕವಾಗಿ ಕಾಲೇಜಿನ ಉಪನ್ಯಾಸಕರೂ ಪುಸ್ತಕಗಳನ್ನು ನೀಡಿ ಸಹಕರಿಸಿದ್ದಾರೆ. ಅವರಿಗೆ ಗೀತಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ತಾಯಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw