ಟೈಫಾಯ್ಡ್ ನಿಂದ ಬಳಲುತ್ತಿದ್ದ ಮಗಳಿಗೆ ಚಿಕಿತ್ಸೆ ಕೊಡಿಸದೇ ಮಂತ್ರವಾದಿಯ ಬಳಿ ಕರೆದೊಯ್ದ ತಂದೆ | ಬದುಕಿ ಬಾಳಬೇಕಿದ್ದ ಯುವತಿ  ಮೌಢ್ಯಕ್ಕೆ ಬಲಿ - Mahanayaka
5:07 AM Wednesday 11 - December 2024

ಟೈಫಾಯ್ಡ್ ನಿಂದ ಬಳಲುತ್ತಿದ್ದ ಮಗಳಿಗೆ ಚಿಕಿತ್ಸೆ ಕೊಡಿಸದೇ ಮಂತ್ರವಾದಿಯ ಬಳಿ ಕರೆದೊಯ್ದ ತಂದೆ | ಬದುಕಿ ಬಾಳಬೇಕಿದ್ದ ಯುವತಿ  ಮೌಢ್ಯಕ್ಕೆ ಬಲಿ

21/02/2021

ಚೆನ್ನೈ: ಟೈಫಾಯ್ಡ್ ನಿಂದ ಬಳಲುತ್ತಿದ್ದ ಮಗಳನ್ನು ತಂದೆಯೊಬ್ಬ ಚಿಕಿತ್ಸೆ ಕೊಡಿಸದೇ ಮಂತ್ರವಾದಿಯ ಬಳಿಗೆ ಕರೆದುಕೊಂಡು ಹೋಗಿದ್ದು,  ಚಿಕಿತ್ಸೆ ದೊರೆಯದ ಹಿನ್ನೆಲೆಯಲ್ಲಿ ಬಾಳಿ ಬದುಕಬೇಕಿದ್ದ ಯುವತಿ ಸಾವನ್ನಪ್ಪಿದ್ದಾಳೆ.

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ನಿವಾಸಿ 19 ವರ್ಷ ವಯಸ್ಸಿನ ಥರಾಣಿ ಸಾವಿಗೀಡಾದ ಯುವತಿಯಾಗಿದ್ದಾಳೆ. 9 ತಿಂಗಳ ಹಿಂದೆಯಷ್ಟೇ ಈಕೆಯ ತಾಯಿ ಸಾವನ್ನಪ್ಪಿದ್ದು, ತಾಯಿಯ ಪ್ರೇತ ಈಕೆಯ ಮೈಮೇಲೆ ಹೊಕ್ಕಿದೆ ಎಂದು ಅನುಮಾನಿಸಿ ಚಿಕಿತ್ಸೆ ನೀಡದೇ ತಂದೆ ಮಂತ್ರವಾದಿಯ ಬಳಿಗೆ ಕರೆದುಕೊಂಡು ಹೋಗಿದ್ದಾನೆ.

ತಾಯಿಯನ್ನು ಬಹಳ ಹಚ್ಚಿಕೊಂಡಿದ್ದ ಥರಾಣಿ, ತಾಯಿ ತೀರಿ ಹೋದ ಮೇಲೆ ಆಕೆಯ ಸಮಾಧಿಯ ಬಳಿಗೆ ಹೋಗಿ ಬರುತ್ತಿದ್ದಳು. ಹೀಗೆ ಹೋಗಿ ಬಂದ ಸಂದರ್ಭದಲ್ಲಿ ಆಕೆಗೆ ಅನಾರೋಗ್ಯ ಆರಂಭವಾಗಿತ್ತು. ಇದರಿಂದಾಗಿ, ತಾಯಿಯ ಪ್ರೇತ ಆಕೆಯ ದೇಹದಲ್ಲಿ ಸೇರಿಕೊಂಡಿದೆ ಎಂದು ತಂದೆ ಅನುಮಾನಿಸಿ ಮಂತ್ರವಾದಿಯ ಬಳಿಗೆ ಕರೆದುಕೊಂಡು ಹೋಗಿದ್ದಾನೆ.

ಟೈಫಾಯ್ಡ್ ನಿಂದ ಅಸ್ವಸ್ಥಳಾಗಿದ್ದ ಥರಾಣಿಯನ್ನು ಪ್ರೇತ ಬಿಡಿಸುತ್ತೇನೆ ಎಂದು ಹೇಳಿದ ಮಂತ್ರವಾದಿ  ಬಾಕ್ಸ್ ವೊಂದರಲ್ಲಿ ಕೂಡಿ ಹಾಕಿ  ಹೊಗೆ ಹಾಕಿದ್ದಾನೆ. ಮೊದಲೇ ಅಸ್ವಸ್ಥಳಾಗಿದ್ದ ಥರಾಣಿ  ಉಸಿರುಗಟ್ಟಿ ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಇದಾದ ಬಳಿಕ ಯುವತಿಯ ತಂದೆ ಆಸ್ಪತ್ರೆಗೆ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ.

ಆಸ್ಪತ್ರೆಯಲ್ಲಿ ವೈದ್ಯರು ಈಕೆಗೆ ಟೈಫಾಯ್ಡ್ ಜ್ವರ ಇದೆ ಎಂದು ಹೇಳಿದ್ದಾರೆ. ಆದರೆ ಇದನ್ನೂ ಮೂಢ ತಂದೆ ನಂಬದೇ, ಇನ್ನೋರ್ವ ಮಂತ್ರವಾದಿಯ ಬಳಿಗೆ ಮಗಳನ್ನು ಮತ್ತೆ ಕರೆದುಕೊಂಡು ಹೋಗಿದ್ದಾನೆ. ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಇಲ್ಲದೇ ಥರಾಣಿ ಮತ್ತಷ್ಟು ಅಸ್ವಸ್ಥಳಾಗಿದ್ದಾಳೆ.

ಥರಾಣಿ ನಡೆದಾಡಲೂ ಶಕ್ತಿ ಇಲ್ಲದ ಪರಿಸ್ಥಿತಿಗೆ ತಲುಪಿದಾಗ ಪಾಪಿ ತಂದೆ  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಕೆಯನ್ನು ದಾಖಲಿಸಿದ್ದಾನೆ. ತೀವ್ರವಾಗಿ ಅಸ್ವಸ್ಥಳಾಗಿದ್ದ ಥರಾಣಿ ತಂದೆಯ ಮೌಢ್ಯದಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಮೃತಪಟ್ಟಿದ್ದಾಳೆ.

ಘಟನೆ ಸಂಬಂಧ ಎಫ್ ಐಆರ್ ದಾಖಲಿಸಲಾಗಿದೆ. ಯುವತಿಯ ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಈ ಪರೀಕ್ಷೆಯನ್ನು ಆಧರಿಸಿ ಮುಂದಿನ ಕ್ರಮವನ್ನು ಕೈಗೊಳ್ಳಲಿದ್ದಾರೆ.

 

ಇತ್ತೀಚಿನ ಸುದ್ದಿ