ಪೊಲೀಸ್ ಸಿಬ್ಬಂದಿಯ ಮೃತದೇಹವನ್ನು ಗ್ರಾಮದ ಹೊರಗೆ ಗಂಟೆಗಟ್ಟಲೆ ಕಾಯಿಸಿದ ದುಷ್ಟರು!
ಗದಗ: ಶಂಕಿತ ಕೊರೊನಾ ಲಕ್ಷಣಗಳಿಂದ ನಿವೃತ್ತ ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದು, ಇವರ ಅಂತ್ಯಕ್ರಿಯೆ ನಮ್ಮ ಗ್ರಾಮದಲ್ಲಿ ನಡೆಯಬಾರದು ಎಂದು ಗ್ರಾಮಸ್ಥರು ಅಡ್ಡಿಪಡಿಸಿದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಬಾಸಲಾಪುರದಲ್ಲಿ ನಡೆದಿದೆ.
ಗ್ರಾಮದ 62 ವರ್ಷ ವರ್ಷ ವಯಸ್ಸಿನ ನಿವೃತ್ತ ಪೊಲೀಸ್ ಸಿಬ್ಬಂದಿ, ಬಾದಾಮಿ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ಮೃತಪಟ್ಟಿದ್ದರು. ಆದರೆ ಕೊರೊನಾ ವರದಿ ಬರುವುದು ತಡವಾಗಿತ್ತು. ಆಸ್ಪತ್ರೆಯವರು ಮೃತದೇಹವನ್ನು ಕೊವಿಡ್ ನಿಯಮ ಪಾಲಿಸದೇ ಹೊದಿಕೆಯಲ್ಲಿ ಸುತ್ತಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಖಾಸಗಿ ಆಸ್ಪತ್ರೆಯವರು ಮಾಡಿದ ಕೆಲಸದಿಂದಾಗಿ ಕುಟುಂಬಸ್ಥರು ಮೃತದೇಹವನ್ನು ಆಂಬುಲೆನ್ಸ್ ನಲ್ಲಿ ಗ್ರಾಮಕ್ಕೆ ತಂದಿದ್ದಾರೆ. ಈ ವೇಳೆ ಗ್ರಾಮಸ್ಥರು ಆಂಬುಲೆನ್ಸ್ ನಲ್ಲಿ ಊರಿನಿಂದಾಚೆಗೆ ತಡೆದಿದ್ದಾರೆ. ಅಂತ್ಯಸಂಸ್ಕಾರಕ್ಕೆ ಬಂದ ಸಂಬಂಧಿಕರನ್ನು ಕೂಡ ಗ್ರಾಮದಾಚೆಗೆ ಬಿಡದೇ ಬೆದರಿಸಿದ್ದಾರೆ. ಇದರಿಂದಾಗಿ ಮೃತದೇಹವನ್ನು ಗಂಟೆಗಟ್ಟಲೆ ಆಂಬುಲೆನ್ಸ್ ನಲ್ಲಿಟ್ಟು ಕುಟುಂಬಸ್ಥರು ಕಾಯಬೇಕಾಯಿತು. ಕೊನೆಗೆ ವಿಷಯ ತಿಳಿದು ಪಿಡಿಓ, ಆರ್.ಐ. ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಮೃತದ ಜಮೀನಿನಲ್ಲಿಯೇ ಕೊವಿಡ್ ನಿಯಮಗಳ ಪ್ರಕಾರ ಅಂತ್ಯಕ್ರಿಯೆ ನಡೆಸಲಾಯಿತು.