ಕೇರಳದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ವೈದ್ಯೆಯ ಹತ್ಯೆ ಪ್ರಕರಣ!
ಕೊಚ್ಚಿ: ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕಾರ ಪ್ರದೇಶದ ತಾಲೂಕು ಆಸ್ಪತ್ರೆಯಲ್ಲಿ ಬುಧವಾರ ಪೊಲೀಸರ ವಶದಲ್ಲಿದ್ದ ಆರೋಪಿಯೋರ್ವ ಚಿಕಿತ್ಸೆ ನೀಡುತ್ತಿದ್ದ ವೈದ್ಯೆ ಡಾ.ವಂದನಾ ದಾಸ್ ಅವರನ್ನು ಕತ್ತರಿ ಮತ್ತು ಚಾಕುವಿನಿಂದ ದಾಳಿ ನಡೆಸಿ ಹತ್ಯೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ವೈದ್ಯರು ತಮ್ಮ ಕರ್ತವ್ಯಕ್ಕೆ ಗೈರು ಹಾಜರಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂದೀಪ್ ಎಂಬ ಆರೋಪಿಯ ಕಾಲಿನ ಗಾಯಕ್ಕೆ ಶುಶ್ರೂಷೆ ಮಾಡುತ್ತಿದ್ದ 23 ವರ್ಷದ ಯುವ ವೈದ್ಯೆ ಡಾ. ವಂದನಾ ದಾಸ್ ಮೇಲೆ ಸಂದೀಪ್, ಇದ್ದಕ್ಕಿದ್ದಂತೆ ಕೋಪೋದ್ರಿಕ್ತನಾಗಿ ಕತ್ತರಿ ಮತ್ತು ಚಿಕ್ಕ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಅಲ್ಲದೆ, ಸಮೀಪದಲ್ಲಿ ನಿಂತಿದ್ದವರ ಮೇಲೂ ದಾಳಿ ಮಾಡಿದ್ದಾನೆ. ತೀವ್ರ ಗಾಯಗೊಂಡ ವೈದ್ಯೆಯನ್ನು ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವೇ ತಾಸುಗಳ ನಂತರ ವೈದ್ಯೆ ಮೃತಪಟ್ಟಿದ್ದರು.
ಈ ಘಟನೆ ಬಗ್ಗೆ ತಕ್ಷಣವೇ ಸ್ಪಂದಿಸಿರುವ ಕೇರಳ ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ತರಾಟೆಗೆತ್ತಿಕೊಂಡಿದೆ. ಇದು ವೈದ್ಯರಿಗೆ ರಕ್ಷಣೆ ನೀಡುವಲ್ಲಿನ ವೈಫಲ್ಯದ ಸಂಕೇತ ಎಂದು ಸರ್ಕಾರವನ್ನು ತರಾಟೆಗೆತ್ತಿಕೊಂಡಿದೆ.
ವೈದ್ಯರು ಮುಷ್ಕರ ಹೂಡಿದ್ದಾರೆ. ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದ್ದಕ್ಕಾಗಿ ನೀವು ಯಾವ ಕಾರಣ ಕೊಡುತ್ತೀರಿ? ಮುಷ್ಕರದಿಂದಾಗಿ ಇಂದು ಯಾವುದೇ ರೋಗಿಗೆ ಉಂಟಾಗುವ ಯಾವುದೇ ಸಮಸ್ಯೆಗೆ ನೀವು ವೈದ್ಯರನ್ನು ದೂಷಿಸಬಹುದೇ’ ಎಂದು ವಿಶೇಷ ಪೀಠವು, ರಾಜ್ಯ ಸರ್ಕಾರವನ್ನೂ ತೀವ್ರವಾಗಿ ಪ್ರಶ್ನಿಸಿದೆ.
‘ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲು ಪೊಲೀಸರಿಗೆ ತರಬೇತಿ ಕೊಟ್ಟಿರುತ್ತದೆ. ಆದರೆ, ಅವರು ಯುವ ವೈದ್ಯೆಯನ್ನು ರಕ್ಷಿಸಲು ವಿಫಲವಾಗಿದ್ದಾರೆ. ಚಿಕಿತ್ಸೆ ಕೊಡಿಸುವುದಕ್ಕಷ್ಟೇ ಸೀಮಿತವಾಗುವುದಲ್ಲ. ಪೊಲೀಸರು ಆ ವ್ಯಕ್ತಿಯು ಅಸಹಜವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ನಂತರವೂ ಆತನನ್ನು ನಿಯಂತ್ರಿಸುವುದು ನಿಮ್ಮ ಜವಾಬ್ದಾರಿಯಾಗಿತ್ತು. ಪೊಲೀಸರು ಅನಿರೀಕ್ಷಿತವಾದುದನ್ನು ತಡೆಯಲು ಸಮರ್ಥರಿರಬೇಕೆನ್ನುವುದು ನಿರೀಕ್ಷಿತ. ಇಲ್ಲದಿದ್ದರೆ ಪೊಲೀಸರ ಅಗತ್ಯವೇ ಇರುವುದಿಲ್ಲ. ಸಾಮಾನ್ಯವಾಗಿ ಎಲ್ಲ ಸಮಯದಲ್ಲೂ ನಾವು ಎಲ್ಲವನ್ನೂ ಉಡಾಫೆಯಾಗಿ ತೆಗೆದುಕೊಳ್ಳುತ್ತೇವೆ. ಈ ವೈದ್ಯೆಯ ರಕ್ಷಣೆಯಲ್ಲಿ ನೀವು ವಿಫಲವಾಗಿಲ್ಲವೇ ಎಂದು ಪೀಠ ಪ್ರಶ್ನಿಸಿದೆ.
ಆರೋಗ್ಯ ಸಚಿವೆಯಿಂದ ವಿವಾದಾತ್ಮಕ ಹೇಳಿಕೆ:
ಅನನುಭವದಿಂದ ವೈದ್ಯೆ ಚಿಕಿತ್ಸೆ ನೀಡಲು ಹಿಂಜರಿದಿರಬಹುದು. ಇದರಿಂದ ಆರೋಪಿ ಕೋಪಗೊಂಡು ದಾಳಿ ನಡೆಸಿರಬಹುದು ಎಂದು ಘಟನೆಗೆ ಸಂಬಂಧಿಸಿದಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರತಿಕ್ರಿಯೆ ನೀಡಿದ್ದು, ಈ ವಿವಾದ ತೀವ್ರ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: ಶಾಕಿಂಗ್ ನ್ಯೂಸ್ : ವೈದ್ಯೆಯನ್ನೇ ಕತ್ತರಿಯಿಂದ ಇರಿದು ಕೊಂದ ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಕರೆತಂದಿದ್ದ ಆರೋಪಿ
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw