ಕೊಲೆಯಾಗಿದ್ದ ಮಹಿಳೆ ಪ್ರಿಯಕರನ ಜೊತೆ ಹೊಟೇಲ್ ನಲ್ಲಿ ಪತ್ತೆ: ಜೈಲುಪಾಲಾಗಿದ್ದ ಪತಿಗೆ ಶಾಕ್

ಮಡಿಕೇರಿ: ಐದು ವರ್ಷಗಳ ಹಿಂದೆ ಕೊಲೆಯಾಗಿದ್ದಳು ಎಂದು ಭಾವಿಸಿದ್ದ ಮಹಿಳೆಯೊಬ್ಬಳು ಜೀವಂತವಾಗಿ ಪ್ರತ್ಯಕ್ಷವಾಗಿದ್ದು, ಪತ್ನಿಯ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಪತಿ ಶಾಕ್ ಆಗಿದ್ದಾನೆ.
ಈ ಘಟನೆ ನಡೆದಿರುವುದು ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ. ಗಂಡನ ಕೈಯಿಂದಲೇ ಹತ್ಯೆಗೀಡಾಗಿದ್ದಾಳೆ ಎಂದು ಭಾವಿಸಲಾಗಿದ್ದ ಮಹಿಳೆ, ಮಂಗಳವಾರ ಸಂಜೆ ಮಡಿಕೇರಿ ನಗರದ ಹೋಟೆಲ್ ನಲ್ಲಿ ತನ್ನ ಪ್ರಿಯಕರನೊಂದಿಗೆ ತಿಂಡಿ ತಿನ್ನುತ್ತಾ ಕುಳಿತಿರುವುದು ಕಂಡು ಬಂದಿದ್ದು, ಇದನ್ನು ನೋಡಿದ ಪತಿಯ ಸ್ನೇಹಿತರು ನೋಡಿದ್ದು, ತಕ್ಷಣವೇ ಪತಿಯ ಗಮನಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
18 ವರ್ಷಗಳ ಹಿಂದೆ ಮಲ್ಲಿಗೆ ಎಂಬಾಕೆಯನ್ನು ಸುರೇಶ್ ಎಂಬವರು ವಿವಾಹವಾಗಿದ್ದರು.
ಇವರಿಗೆ ಇಬ್ಬರು ಮಕ್ಕಳೂ ಜನಿಸಿದ್ದರು. 2020ರ ನವೆಂಬರ್ ನಲ್ಲಿ ಮಲ್ಲಿಗೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಪತಿ ಸುರೇಶ್ ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪತ್ನಿ ಗಣೇಶ್ ಎಂಬಾತನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಓಡಿ ಹೋಗಿರುವುದು ಗೊತ್ತಿದ್ದರೂ ಸುರೇಶ್ ಮನನೊಂದು ಸುಮ್ಮನಾಗಿದ್ದರು ಎನ್ನಲಾಗಿದೆ.
2021ರ ಜೂನ್ ಮೂರನೇ ವಾರದಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಪೊಲೀಸ್ ಠಾಣೆಯ ಸಿಬ್ಬಂದಿ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾಗಿದೆ, ಗುರುತು ಪತ್ತೆ ಮಾಡು ಎಂದು ಸುರೇಶ್ ನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಕಂಡ ಮೃತದೇಹವನ್ನು ನಿನ್ನ ಪತ್ನಿಯ ಮೃತದೇಹ ಅಂತ ಒಪ್ಪಿಕೋ ಎಂದು ಸುರೇಶ್ ಗೆ ಚಿತ್ರಹಿಂಸೆ ನೀಡಿದ್ದರಂತೆ, ಈ ಬಗ್ಗೆ 18–07–2021ರಲ್ಲಿ ಬೆಟ್ಟದಪುರ ಠಾಣೆಯಲ್ಲಿ ಸುರೇಶ್ ವಿರುದ್ಧ ಪ್ರಕರಣ ದಾಖಲಾಗಿ ಅವರು ಜೈಲು ಪಾಲಾದರು.
2022ರ ಜನವರಿಯಲ್ಲಿ ಸುರೇಶ್ ಅವರ ವಕೀಲರ ಕೋರಿಕೆ ಮೇರೆಗೆ ಮಲ್ಲಿಗೆ ಅಸ್ತಿ ಪಂಜರ ಹಾಗೂ ಆಕೆಯ ತಾಯಿಯ ರಕ್ತದ ಮಾದರಿ ಸಂಗ್ರಹಿಸಿ ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ ಅಲ್ಲಿ ಬೆಟ್ಟದಪುರ ಪೊಲಿಸರು ಮಲ್ಲಿಗೆಯದ್ದು ಎಂದು ಪ್ರತಿಪಾದಿಸಿದ ದೇಹ ಆಕೆಯದ್ದಲ್ಲ ಎಂಬ ವರದಿ ಬರುತ್ತದೆ.
ಆದರೂ ಬೆಟ್ಟದಪುರ ಪೊಲೀಸರು ಸುರೇಶನನ್ನು ಎರಡು ವರ್ಷ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತಾರೆ. ಇದಾದ ಬಳಿಕ ವಕೀಲ ಪಾಂಡು, ಹರಸಾಸಹಪಟ್ಟು ಹೈಕೋರ್ಟ್ ಮೊರೆ ಹೋಗಿ 2024ರಲ್ಲಿ ಸುರೇಶ್ ಅವರನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬಂದಿದ್ದರು.
ಇಷ್ಟೆಲ್ಲ ಆದ ಬಳಿಕ, ಕೊಲೆಯಾಗಿರುವ ಮಹಿಳೆ ತನ್ನ ಹೆಂಡತಿಯಲ್ಲ. ತಾನು ಕೊಲೆ ಮಾಡಿಲ್ಲ, ಹೆಂಡತಿಯನ್ನು ಹುಡುಕಿಕೊಡಿ ಎಂದು ಸುರೇಶ್ ಮತ್ತೆ ಪೊಲೀಸರಿಗೆ ದೂರು ನೀಡಿದ್ದರು.
ಈ ಎಲ್ಲದರ ನಡುವೆಯೇ ಮಲ್ಲಿಗೆ ಜೀವಂತವಾಗಿ ಮಡಿಕೇರಿಯ ಹೊಟೇಲ್ ನಲ್ಲಿ ತನ್ನ ಪ್ರಿಯಕರನ ಜೊತೆಗೆ ತಿಂಡಿ ತಿನ್ನುತ್ತಾ ಆರಾಮವಾಗಿರೋದು ಸುರೇಶ್ ಹಾಗೂ ಅವರ ಸ್ನೇಹಿತರಿಗೆ ಕಂಡು ಬಂದಿದ್ದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಮಲ್ಲಿಗೆಯನ್ನು ವಶ ಪಡಿಸಿಕೊಂಡಿದ್ದಾರೆ. ಪೊಲೀಸರು ವಿಚಾರಿಸಿದಾಗ ತಾನು ವಿರಾಜಪೇಟೆಯ ತಾಲ್ಲೂಕಿನ ಟಿಶೆಟ್ಟಿಗೇರಿ ಗ್ರಾಮದಲ್ಲಿ ಪ್ರಿಯಕರನ ಜೊತೆಗೆ ವಾಸವಿರುವುದಾಗಿ ಆಕೆ ಹೇಳಿದ್ದಾಳೆ.
ಸದ್ಯ ಮಲ್ಲಿಗೆಯನ್ನು ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಬೆಟ್ಟದಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ವಕೀಲ ಪಾಂಡು ಅವರ ಶ್ರಮದಿಂದಾಗಿ ಮಲ್ಲಿಗೆಯನ್ನು ಇದೀಗ ಮೈಸೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಇದೀಗ ಸುಳ್ಳು ಆರೋಪ ಪಟ್ಟಿ ದಾಖಲಿಸಿದ ಬೆಟ್ಟದಪುರ ಠಾಣೆ ತನಿಖಾಧಿಕಾರಿ, ಮೈಸೂರು ಎಸ್ ಪಿ ಸೇರಿದಂತೆ ಹಲವು ಅಧಿಕಾರಿಗಳನ್ನು ವಿಚಾರಣೆಗೆ ಕರೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: