ಮೃತ ಕಾಶ್ಮೀರಿ ಪಂಡಿತನ ಅಂತಿಮ ವಿಧಿವಿಧಾನ ನಡೆಸಿದ ಮುಸ್ಲಿಮರು!
16/11/2023
ಪಾಂಪೋರ್: ಕಾಶ್ಮೀರಿ ಪಂಡಿತರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ನೆರೆಹೊರೆಯ ಮುಸ್ಲಿಮರು ಸೇರಿ ಅವರ ಅಂತಿಮ ವಿಧಿವಿಧಾನಗಳನ್ನು ನಡೆಸಿದ ಸೌಹಾರ್ದಯುತ ಘಟನೆಯೊಂದು ಪಾಂಪೋರ್ ಪಟ್ಟಣದ ಡ್ರಂಗಬಾಲ್ ನಲ್ಲಿ ನಡೆದಿದೆ.
ಕಾಶ್ಮೀರಿ ಪಂಡಿತ ಅಶೋಕ್ ಕುಮಾರ್ ವಾಂಗೂ ಅವರು ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಪಾಂಪೋರ್ ಪಟ್ಟಣದ ಡ್ರಂಗಬಾಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.
ಪಾರ್ಥಿವ ಶರೀರವನ್ನು ಜಮ್ಮುವಿಗೆ ಕೊಂಡೊಯ್ಯುವ ಬದಲು ಕಾಶ್ಮೀರ ಪಂಡಿತ ಸಮುದಾಯವು ಇಲ್ಲಿಯೇ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ನಿರ್ಧರಿಸಿತು. ಈ ಸಂದರ್ಭ ನೆರೆಯ ಮುಸ್ಲಿಂ ಸಮುದಾಯದ ಜನರು ಪಂಡಿತರ ನೆರವಿಗೆ ಧಾವಿಸಿದ್ದಾರೆ.
ಪುರುಷರು, ಮಹಿಳೆಯರು ಮತ್ತು ಮಕ್ಕಳೆನ್ನದೇ ಎಲ್ಲರೂ ಸೇರಿ ಸೌಹಾರ್ದತೆಯೊಂದಿಗೆ ಅಂತಿಮ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
ಈ ಪ್ರದೇಶವು ಮೊದಲಿನಿಂದಲೂ ಹಿಂದೂಗಳು, ಸಿಖ್ಖರು ಮತ್ತು ಮುಸ್ಲಿಮರ ಐಕ್ಯತೆಗೆ ಹೆಸರಾಗಿದೆ. ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ.