ವಕ್ಫ್ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ: ಪ್ರತಿಭಟನೆ ನಡೆಸ್ತೀವಿ ಎಂದ ಮುಸ್ಲಿಂ ಪರ್ಸನಲ್ ಲಾ ಬೋರ್ಡ್

ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಮಾರ್ಚ್ ಹತ್ತರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಹೇಳಿದೆ.
ಮುಂದಿನ ಲೋಕಸಭಾ ಕಲಾಪದ ವೇಳೆ ಕೇಂದ್ರ ಸರಕಾರ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದ್ದು, ಅದಕ್ಕೆ ಮುಂಚಿತವಾಗಿ ಈ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಗೆ ಪೂರಕವಾಗಿ ಮಾರ್ಚ್ ಏಳರಂದು ಬಿಹಾರದ ಪಾಟ್ನಾ ಮತ್ತು ಆಂಧ್ರಪ್ರದೇಶದ ವಿಜಯವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಮುಸ್ಲಿಂ ಪರ್ಸನಲ್ ಬೋರ್ಡ್ ನ ವಕ್ತಾರ ಡಾಕ್ಟರ್ ಸೈಯದ್ ಕಾಸಿಂ ರಸೂಲ್ ಇಲ್ಯಾಸಿ ಹೇಳಿದ್ದಾರೆ.
ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಈ ದೇಶದ ಮುಸ್ಲಿಂ ಸಂಘಟನೆಗಳು, ವಿದ್ವಾಂಸರು ಮತ್ತು ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯು ವಕ್ಫ್ ಆಸ್ತಿಯ ಭದ್ರತೆಗೆ ಬೆದರಿಕೆಯಾಗಲಿದೆ ಎಂದು ಮುಸ್ಲಿಮರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಕೇಂದ್ರ ಸರಕಾರ ಇವು ಯಾವುದನ್ನೂ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಇದೀಗ ಅದು ಪಾರ್ಲಿಮೆಂಟ್ ನಲ್ಲಿ ಮಸೂದೆಯನ್ನು ಮಂಡಿಸಲು ಮುಂದಾಗಿದೆ. ಆದ್ದರಿಂದ ಮುಸ್ಲಿಂ ಪರ್ಸನಲ್ ಬೋರ್ಡ್ ಮಾರ್ಚ್ ಹತ್ತರಂದು ಜಂತರ್ ಮಂತರ್ನಲ್ಲಿ ಧರಣಿ ನಡೆಸಲು ತೀರ್ಮಾನಿಸಿದೆ ಎಂದು ವಕ್ತಾರ ಖಾಸಿಂ ರಸೂಲ್ ಇಲ್ಯಾಸಿ ತಿಳಿಸಿದ್ದಾರೆ.
ಇದೇ ವೇಳೆ ಮಾಧ್ಯಮಗಳು ವಕ್ಫ್ ಆಸ್ತಿ ಬಗ್ಗೆ ತಪ್ಪಾಗಿ ವ್ಯಾಖ್ಯಾನಿಸುತ್ತಿರುವುದನ್ನು ಕೂಡ ಅವರು ಖಂಡಿಸಿದ್ದಾರೆ. ಮುಸ್ಲಿಂ ವ್ಯಕ್ತಿಗಳು ವೈಯಕ್ತಿಕವಾಗಿ ದಾನದ ರೂಪದಲ್ಲಿ ನೀಡಿರುವ ಆಸ್ತಿಯ ಬಗ್ಗೆ ಮಾಧ್ಯಮಗಳು ತಿಳುವಳಿಕೆ ಇಲ್ಲದೆ ತಪ್ಪಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿವೆ ಎಂದವರು ಹೇಳಿದ್ದಾರೆ. ಆಂಧ್ರಪ್ರದೇಶ ತಮಿಳುನಾಡು ಮತ್ತು ಒಡಿಸ್ಸಾದ ದೇವಾಲಯಗಳ ಆಸ್ತಿಗಳು ಇಡೀ ದೇಶದ ವಕ್ಪ್ ಆಸ್ತಿಗಿಂತಲೂ ಹೆಚ್ಚಿದೆ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj