ಮುಸ್ಲಿಮ್ ಯುವಕನ ಪ್ರಾಣ ಕಾಪಾಡಿದ ಹಿಂದೂ ಯುವಕ: ದಕ್ಷಿಣ ಕನ್ನಡದಲ್ಲಿ ಸೌಹಾರ್ದತೆ ಜೀವಂತ
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೂರು ಯುವಕರ ಬರ್ಬರ ಹತ್ಯೆ, ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದರೊಂದಿಗೆ ರಾಜ್ಯಾದ್ಯಂತ ಕೊಲೆಗಳ ಬಗ್ಗೆ ಚರ್ಚೆಯಾಗಿತ್ತು. ಜೀವ ತೆಗೆದ ಕಾರಣಕ್ಕೆ ರಾಜ್ಯಾದ್ಯಂತ ಸುದ್ದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಇದೀಗ ಜೀವ ಉಳಿಸಿದ ಸೌಹಾರ್ದತೆಯ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಹರಿಹರ ಪಲ್ಲತ್ತಡ್ಕದಲ್ಲಿ ನೀರು ಪಾಲಾಗುತ್ತಿದ್ದ ಮುಸ್ಲಿಮ್ ಯುವಕನನ್ನು ಹಿಂದೂ ಯುವಕನೋರ್ವ ತನ್ನ ಪ್ರಾಣದ ಹಂಗುತೊರೆದು ರಕ್ಷಿಸಿದ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಳೆ ಜೋರಾಗಿದೆ. ಅದ್ರಲ್ಲೂ ಸುಳ್ಯ, ಕಡಬದಲ್ಲೂ ಮಳೆ ಅಬ್ಬರವಂತೂ ಬಲು ಜೋರಾಗಿದೆ. ಈ ಮಧ್ಯೆ ಸುಳ್ಯದ ಹರಿಹರ ಪಲ್ಲತ್ತಡ್ಕದಲ್ಲಿ ರಾಶಿ ಬಿದ್ದ ಮರದ ದಿಮ್ಮಿಗಳನ್ನು ತೆರವು ಮಾಡುತ್ತಿದ್ದ ಕ್ರೇನ್ ಆಪರೇಟರ್ ಒಬ್ರು ಹೊಳೆಯ ಪಕ್ಕದಲ್ಲಿ ನಿಂತಿದ್ದ ವೇಳೆ ನೀರಿಗೆ ಬಿದ್ದ ಘಟನೆ ನಡೆದಿತ್ತು. ಈ ವೇಳೆ ಯುವಕನೋರ್ವ ನದಿಗೆ ಹಾರಿ ಅವರನ್ನು ರಕ್ಷಿಸಿದ ಮಾನವೀಯ ಘಟನೆ ನಡೆದಿದೆ.
ಹೌದು! ಪಂಜ ಸಮೀಪದ ಪಡ್ಪಿನಂಗಡಿ ನಿವಾಸಿ ಶರೀಫ್ ಎಂಬುವವರ ಕ್ರೇನ್ ಹಾಗೂ ಸ್ಥಳೀಯ ನಿವಾಸಿಯ ಜೆಸಿಬಿ ವಾಹನಗಳನ್ನು ತರಿಸಲಾಗಿತ್ತು. ಕಾರ್ಯಾಚರಣೆಯ ವೇಳೆ ಆಪರೇಟರ್ ಶರೀಫ್ ಕ್ರೇನ್ ನಿಂದ ಇಳಿದು ಹೊಳೆ ಪಕ್ಕದಲ್ಲಿ ನಿಂತಿದ್ದಾಗ ಮರದ ದಿಮ್ಮಿಯೊಂದು ತಾಗಿದ ಪರಿಣಾಮ ಹರಿಯುತ್ತಿರುವ ನೀರಿಗೆ ಬಿದ್ದಿದ್ದರು.
ಈ ವೇಳೆ ಹರಿಹರ ನಿವಾಸಿ ಸೋಮಶೇಖರ್ ಕಟ್ಟೆಮನೆ ಎಂಬುವವರು ಪ್ರಾಣಾಪಾಯವನ್ನು ಲೆಕ್ಕಿಸದೇ ಹೊಳೆಗೆ ಜಿಗಿದು ಶರೀಫ್ ರನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಜೆಸಿಬಿ ಹಾಗೂ ಹಗ್ಗದ ಸಹಾಯದಿಂದ ಊರಿನ ಇತರರು ಸೇರಿ ಶರೀಫ್ ರನ್ನು ಮೇಲಕ್ಕೆತ್ತಿ ಜೀವವನ್ನು ಉಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka