ಮಹತ್ವದ ನಿರ್ಧಾರಕ್ಕೆ ಬಂದ ಸಂಜೋಲಿಯ ಮುಸ್ಲಿಮರು: ಮಾದರಿಯಾದ ತೀರ್ಮಾನ - Mahanayaka
8:18 AM Thursday 12 - December 2024

ಮಹತ್ವದ ನಿರ್ಧಾರಕ್ಕೆ ಬಂದ ಸಂಜೋಲಿಯ ಮುಸ್ಲಿಮರು: ಮಾದರಿಯಾದ ತೀರ್ಮಾನ

14/09/2024

ಹಿಮಾಚಲ ಪ್ರದೇಶದ ಸಂಜೋಲಿಯ ಮುಸ್ಲಿಮರು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲಿನ ಮಸೀದಿಯ ವಿರುದ್ಧ ದೇವ್ ಭೂಮಿ ಸಂಘರ್ಶ್ ಸಮಿತಿಯು ಭಾರಿ ಪ್ರತಿಭಟನೆಯನ್ನು ನಡೆಸಿತ್ತು. ಸೆಪ್ಟೆಂಬರ್ 11ರಂದು ಸಂಜೋಲಿ ಬಂದ್ ನಡೆಸಿತ್ತು. ಅಹೋರಾತ್ರಿ ಪ್ರತಿಭಟನೆಗಳೂ ನಡೆಯುತ್ತಿದ್ದವು. ಈ ನಡುವೆ ಅಕ್ರಮ ಎಂದು ಕಂಡು ಬಂದ ಮಸೀದಿಯ ಭಾಗವನ್ನು ತೆರವುಗೊಳಿಸಲು ಸ್ಥಳೀಯ ಮುಸ್ಲಿಂ ವೆಲ್ಫೇರ್ ಸಮಿತಿಯು ಮುನ್ಸಿಪಲ್ ಕಮಿಷನರ್ ಗೆ ಅನುಮತಿ ನೀಡಿದೆ.

ಈ ವೆಲ್ಫೇರ್ ಸಮಿತಿಯಲ್ಲಿ ಮಸೀದಿಯ ಇಮಾಮರು ವಕ್ಫ್ ಬೋರ್ಡ್ ಸದಸ್ಯರು ಮತ್ತು ಮಸೀದಿಯ ಮ್ಯಾನೇಜ್ ಮೆಂಟ್ ಕಮಿಟಿ ಸದಸ್ಯರು ಕೂಡ ಇದ್ದಾರೆ. ಸಮಿತಿಯ ಸದಸ್ಯರಾದ ಮುಫ್ತಿ ಮುಹಮ್ಮದ್ ಶಾಫಿ ಕಾಶ್ಮೀರ್ ಅವರು ಮಾತಾಡುತ್ತಾ ಸಂಜೋಲಿಯ ಮಸೀದಿಯ ಅಕ್ರಮ ಭಾಗವನ್ನು ತೆರವುಗೊಳಿಸುವುದಕ್ಕೆ ನಮಗೆ ಅನುಮತಿ ನೀಡುವಂತೆ ನಾವು ಮುನ್ಸಿಪಾಲಿಟಿ ಕಮಿಷನರ್ ಗೆ ಕೋರಿಕೊಂಡಿದ್ದೇವೆ. ಪ್ರದೇಶದ ಶಾಂತಿಯನ್ನು ಮನಗಂಡು ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ನಾವಿಲ್ಲಿ ದಶಕಗಳಿಂದ ವಾಸಿಸುತ್ತಿದ್ದೇವೆ. ಪ್ರದೇಶದ ಶಾಂತಿಗೆ ನಮ್ಮ ಬದ್ಧತೆಯನ್ನು ಈ ನಿರ್ಧಾರ ಸೂಚಿಸುತ್ತದೆ ಎಂದವರು ಹೇಳಿದ್ದಾರೆ.

ಇದೇ ವೇಳೆ ಮಸೀದಿ ಅಕ್ರಮ ಭಾಗವನ್ನು ತೆರವುಗೊಳಿಸುವಂತೆ ದಿನಗಳಿಂದ ಪ್ರತಿಭಟಿಸುತ್ತಿದ್ದ ದೇವ್ ಭೂಮಿ ಸಂಘರ್ಶ್ ಸಮಿತಿಯ ಸದಸ್ಯರು ಈ ನಿರ್ಧಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಾವು ಈ ಮುಸ್ಲಿಂ ವೆಲ್ಫೇರ್ ಸಮಿತಿಯ ನಿರ್ಧಾರಕ್ಕೆ ಅಭಾರಿಯಾಗಿದ್ದೇವೆ. ನಾವು ಅವರನ್ನು ಬೆಂಬಲಿಸುತ್ತೇವೆ ಮತ್ತು ಅವರ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಸಮಿತಿಯ ಸದಸ್ಯ ವಿಜಯ್ ಶರ್ಮ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ