ನನ್ನ ದೇಶ -ನನಗೆ ಹೆಮ್ಮೆ| ಚಂದ್ರಯಾನ-3 - Mahanayaka
6:05 AM Thursday 12 - December 2024

ನನ್ನ ದೇಶ -ನನಗೆ ಹೆಮ್ಮೆ| ಚಂದ್ರಯಾನ-3

shrikantha pathremara
25/08/2023

  • ಶ್ರೀಕಾಂತ ಪತ್ರೆಮರ

ಚಂದ್ರಯಾನ -3 ರ ಯಶೋಗಾಥೆಯ ಕುರಿತು ಅದೇಕೋ ಕವನ ಪದ್ಯ ಬರೆಯಲು ಮನಸಾಗುತ್ತಿಲ್ಲ. ಕಾರಣ ನಿಜ ಭಾವಗಳನ್ನು ಹೊರಹಾಕಲು ಗದ್ಯವೇ ಶ್ರೇಷ್ಠ ಎಂಬ ನಿಲುವು ನನ್ನದು.

ಇಸ್ರೋ ಸಂಸ್ಥೆಯು ಇಡೀ ಭಾರತ ದೇಶ ಹೆಮ್ಮೆ ಪಡುವ ಮೈಲುಗಲ್ಲುಗಳನ್ನು ದಾಖಲಿಸುತ್ತಲೇ ಬಂದಿದೆ. 23-08-2023 ರ ಬುಧವಾರದ ಚಂದ್ರಯಾನ-3 ರ ಕಡೆಯ ಘಟ್ಟ ಯಶಸ್ವಿಯಾದಾಗ ಉಕ್ಕಿ ಬಂದ ಸಂತಸದ ಭಾವೋತ್ಕರ್ಷವನ್ನು ಹೇಗೆ ಪದಗಳಲ್ಲಿ ಹಿಡಿದಿಡುವುದು. ಇದು ಹಲವು ದಶಕಗಳ ಹಲವು ವಿಜ್ಞಾನಿಗಳ ಪರಿಶ್ರಮದ, ಪ್ರಜಾಪ್ರಭುತ್ವದ ನಾಯಕರ ದೂರದರ್ಶಿತ್ವದ ಫಲಶ್ರುತಿ. ಅಗತ್ಯ ಸಂಶೋಧನೆಗಳನ್ನು ಮಾಡಲು ಅವಕಾಶವಿತ್ತ ಪ್ರಭುತ್ವಕ್ಕೆ ಮೊದಲು ನಮಿಸಬೇಕು.

ತಮ್ಮ ಮೇಲೆ ಇಟ್ಟ ಭರವಸೆಯನ್ನು ಹುಸಿಗೊಳಿಸದೆ ಯಶಸ್ಸನ್ನು ಕೊಟ್ಟ ಇಸ್ರೋ ಸಂಸ್ಥೆಯ ವಿಜ್ಞಾನಿಗಳ ಸಮೂಹಕ್ಕೆ ಅಭಿನಂದನೆಗಳು. ಇದಕ್ಕೆ ಪೂರಕವಾದ ಸಲಕರಣೆಗಳನ್ನು ಒದಗಿಸಿದ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಸಂಸ್ಥೆಗಳ ಕ್ಷಮತೆಯನ್ನೂ ಸ್ಮರಿಸಲೇಬೇಕು.

ಭೂಮಿಯ ಮೂಲೆಯೊಂದರಲ್ಲಿ ಕುಳಿತು ಲಕ್ಷಾಂತರ ಮೈಲುಗಳಷ್ಟು ದೂರದಲ್ಲಿರುವ ಆಕಾಶಕಾಯದತ್ತ ಯಂತ್ರವನ್ನು ಕಳುಹಿಸಿ, ಅಂದುಕೊಂಡಂತೆ ನಿಧಾನವಾಗಿ ಇಳಿಸಿ, ಭೂಮಿಯಿಂದ ನಿಯಂತ್ರಿಸುವ ಕೌಶಲ್ಯವನ್ನು, ವಿಶೇಷ ಜ್ಞಾನವನ್ನು ಪಡೆದಿರುವ ವಿಜ್ಞಾನಿಗಳಿಗೆ, ಅವರ ಸಾಧನೆಗೆ ಶರಣೆನ್ನುವೆನು.

ನಮ್ಮ ಭಾರತ ದೇಶವು ಇಂದು ಸಮರ್ಥ ನಾಯಕತ್ವದಲ್ಲಿ ಅಭಿವೃದ್ಧಿಯ ದೊಡ್ಡ ಹೆಜ್ಜೆಗಳನ್ನು ಇಡುತ್ತಿರುವುದಂತೂ ಸತ್ಯ. ಬಡವರ, ಕೊಳಕರ, ಕೈಲಾಗದವರ ದೇಶವೆಂದು ನನ್ನ ದೇಶವನ್ನು ಹೀಗಳೆದ ವಿದೇಶಿಗರಿಗೆ, ಇಲ್ಲಿಯೇ ಇದ್ದು ಹೆತ್ತ ತಾಯಿಯಂತಿರುವ ತಾಯ್ನಾಡನ್ನು ತೆಗಳುವವರಿಗೆ, ದೇಶ ಪ್ರೇಮದ ಪರಾಕಾಷ್ಠೆಯೆನಿಸುವ ಯೋಧರು, ವಿಜ್ಞಾನಿಗಳು, ಬೃಹತ್ ಕೈಗಾರಿಕೋದ್ಯಮಿಗಳು ಅವರುಗಳ ಸಾಧನೆಗಳ ಮೂಲಕ ಉತ್ತರ‌ನೀಡುತ್ತಿರುವುದ ಕಂಡು ನನ್ನ ಮನಸ್ಸು ಅಮಿತಾನಂದದಲ್ಲಿ ತೋಯ್ದು ಹೋಗಿದೆ.

ಈ ಪುಣ್ಯ ಭೂಮಿಯು ನಿರಾಶ್ರಿತರಾಗಿ ದೇಹೀ ಎಂದು ಬೇಡಿ ಬಂದವರಿಗೆ ಆಶ್ರಯಕೊಟ್ಟ ದಯೆಯ ಧರ್ಮದ ನಾಡು. ಹಲವು ಶತಮಾನಗಳಿಂದ ಅನ್ಯರ ದಾಳಿಗಳನ್ನು ಮೆಟ್ಟಿ‌ನಿಂತು ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿರುವ ಅಂತಃಶಕ್ತಿಯ ನೆಲೆವೀಡು. ಲೌಕಿಕದ, ಅಲೌಕಿಕದ ಜ್ಞಾನದ ಉತ್ತುಂಗವನ್ನು ಸಾಧಿಸಿದ್ದ ಸಿದ್ಧಿಪುರುಷರ, ಸಾಧಕರ ಭೂಮಿ. ಗತವಾಗಿದ್ದ ಶ್ರೇಷ್ಠತೆಯನ್ನು ಮತ್ತೆ ಪುನರ್ ಪ್ರತಿಷ್ಠಾಪಿಸುವ ಯಜ್ಞ ಕಾರ್ಯದಲ್ಲಿ ಹೊರಟಿರುವ ನವ ಯುವ ಪಡೆಯ ಈ ಭಾರತ ಮಾತೆಗೆ ಶಿರಬಾಗಿ ನಮಿಸುವೆ.

ಕ್ಷಿಪ್ರಗತಿಯಲ್ಲಿ ಹಲವಾರು ಆವಿಷ್ಕಾರಗಳು, ಹೊಸ ತಂತ್ರಜ್ಞಾನಗಳು ಹೊರ ಹೊಮ್ಮುತ್ತಿರುವ ಈ ತಾಂತ್ರಿಕ ಯುಗದಲ್ಲಿ ನಾನಿದ್ದೇನೆ ಎಂಬುದೇ ಹೆಮ್ಮೆ. ನಮ್ಮ ಅಭೇದ್ಯವಾದ, ಅಮೋಘವಾದ ಭವ್ಯ ದೇವಸ್ಥಾನಗಳು, ಮಂದಿರಗಳು, ಕಲೆಯ ಶ್ರೇಷ್ಠತೆಯ ಕುರುಹುಗಳಾಗಿವೆ. ಸೃಷ್ಟಿಯ ಎಲ್ಲ ಜಡ, ಜೀವ ಸಂಕುಲದಲ್ಲಿ ಮಹಾಮಹಿಮನ ಇರುವಿಕೆಯನ್ನು ಸಾರುವ ಈ ನಾಡಿನ ಧರ್ಮವನ್ನು, ದೃಷ್ಟಿಕೋನವನ್ನು ಕಂಡು ಬೆರಗಾಗುತ್ತಲೇ ಇದ್ದೇನೆ. ಎಷ್ಟು ಅಗೆದರೂ ಜ್ಞಾನದ ಆಳಕ್ಕೆ ಕರೆದೊಯ್ಯುವ ವೇದಗಳು, ಗ್ರಂಥಗಳು, ಉಪನಿಷತ್ತುಗಳು ಬಹು ದೊಡ್ಡ ಭೌದ್ಧಿಕ ಆಸ್ತಿಯಾಗಿವೆ. ಸಂಸ್ಕೃತ ಭಾಷೆಯ ಶ್ರೇಷ್ಠತೆ, ಬಹು ಭಾಷೆಗಳ ಪ್ರಾಚೀನತೆ, ಅವುಗಳಲ್ಲಿನ ವೈಜ್ಞಾನಿಕತೆ ಕಂಡು ವಿಸ್ಮಯಗೊಂಡಿದ್ದೇನೆ.

ಇಂತಹ ಮಹಾನ್ ಇತಿಹಾಸವಿರುವ ಈ ನಾಡು ಹೊಸ ಭಾಷ್ಯಗಳನ್ನು ಬರೆಯದೆ ಮತ್ಯಾರು ಬರೆಯಲು ಸಾಧ್ಯ ಎಂಬ ಗರ್ವವೂ ಉದರದಿಂದ ಮೇಲೇರುತ್ತದೆ.

ಇನ್ನೂ ಸಾಧನೆಯ ಕ್ಷಣಗಳು ಮುಂದಿನ ವರ್ಷಗಳಲ್ಲಿ ಅನಾವರಣಗೊಳ್ಳಲಿವೆ. ಅವನ್ನು ನಾವು ಕಣ್ಣು ತುಂಬಿಕೊಳ್ಳಲು ಆಯುಷ್ಯವನ್ನು ದಯಾಮಯನು ಕೊಡಬೇಕು.

ಮತ್ತೊಮ್ಮೆ ಅಪರೂಪದ ಸಾಧನೆ ಮಾಡಿದ ಇಸ್ರೋ ಸಂಸ್ಥೆಗೆ, ಅದಕ್ಕೆ ಪೂರಕವಾಗಿ ಹೆಗಲು ಕೊಡುತ್ತಿರುವ ಪ್ರಭುತ್ವಕ್ಕೆ ನಮನಗಳು, ಅಭಿನಂದನೆಗಳು.

ಇತ್ತೀಚಿನ ಸುದ್ದಿ