ಮೈಸೂರು ಕೊಡಗು ಕ್ಷೇತ್ರದ ಟಿಕೆಟ್ ಜೆಡಿಎಸ್ ಪಾಲಾಗುತ್ತಾ?: ಸಂಸದ ಪ್ರತಾಪ್ ಸಿಂಹಗೆ ಸಂಕಷ್ಟ! - Mahanayaka
7:19 PM Thursday 12 - December 2024

ಮೈಸೂರು ಕೊಡಗು ಕ್ಷೇತ್ರದ ಟಿಕೆಟ್ ಜೆಡಿಎಸ್ ಪಾಲಾಗುತ್ತಾ?: ಸಂಸದ ಪ್ರತಾಪ್ ಸಿಂಹಗೆ ಸಂಕಷ್ಟ!

h d kumaraswamy
24/02/2024

ಮೈಸೂರು: ಜೆಡಿಎಸ್—ಬಿಜೆಪಿ ನಡುವಿನ ಮೈತ್ರಿ ಇದೀಗ ಹಾಲಿ ಬಿಜೆಪಿ ಸಂಸದರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಪೈಕಿ ಮೈಸೂರು ಕೊಡಗು ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣಿಟ್ಟಿದ್ದು, ಹಾಲಿ ಸಂಸದ ಪ್ರತಾಪ್ ಸಿಂಹ ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ಜೆಡಿಎಸ್ ನಿಂದ ಟಿಕೆಟ್ ಸಿಗಲಿದ್ದು, ಸೀಟು ಹಂಚಿಕೆ ಸೂತ್ರ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಕಗ್ಗಂಟಾಗಿ ಪರಿಮಿಸಿದೆ ಎನ್ನಲಾಗುತ್ತಿದೆ.

ಕ್ಷೇತ್ರ ಅದಲು ಬದಲು ಮಾಡಲು ಹೆಚ್.ಡಿ.ಕುಮಾರಸ್ವಾಮಿ ಸಮ್ಮತಿ ಸೂಚಿಸಿದರೆ, ಜೆಡಿಎಸ್ ವ್ಯಕ್ತಿಗೆ ಬಿಜೆಪಿ ಟಿಕೆಟ್ ಸಿಗಲಿದೆ. ದೇವೇಗೌಡರ ಕುಟುಂಬಕ್ಕೆ ಆಪ್ತವಾಗಿರುವ ಸಾ.ರಾ.ಮಹೇಶ್ ಅವರನ್ನು ಜೆಡಿಎಸ್ ಕಣಕ್ಕಿಳಿಸಲು ಆಸಕ್ತಿ ತೋರಿದೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಮೂರನೇ ಬಾರಿಗೆ ಸ್ಪರ್ಧಿಸಲು ಸಿದ್ಧವಾಗುತ್ತಿದ್ದಂತೆಯೇ ಜೆಡಿಎಸ್ ಜೊತೆಗಿನ ಮೈತ್ರಿ ಸಂಕಷ್ಟ ತಂದಿದೆ. ಆದರೂ ಪ್ರತಾಪ್ ಸಿಂಹ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದು, ಈಗಾಗಲೇ ವೈಯಕ್ತಿಕ ನೆಲೆಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಸಾಧನೆಯ ರಿಪೋರ್ಟ್ ಕಾರ್ಡ್ ನ್ನು ಬಿಜೆಪಿ ವರಿಷ್ಠರಿಗೆ ತಲುಪಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಹೀನಾಯವಾಗಿ ಸೋತಿತ್ತು. ಇದೀಗ ಈ ಬಾರಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಮಂಡ್ಯ ಮತ್ತು ಮೈಸೂರು ಕೊಡಗು ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಬಿಗ್ ಫೈಟ್ ಆರಂಭವಾಗಿದ್ದು, ಹಾಲಿ ಸಂಸದರಿಗೇ ಕ್ಷೇತ್ರ ಸಿಗುತ್ತಾ ಅನ್ನೋ ಅನುಮಾನ ಶುರುವಾಗಿದೆ.

ಅಂದ ಹಾಗೆ, ರಾಜ್ಯದಲ್ಲಿ ಸಾಕಷ್ಟು ಪ್ರಭಾವದಿಂದ ಬೆಳವಣಿಗೆ ಹೊಂದಿದ್ದ, ಬಹುಜನ ಸಮಾಜ ಪಾರ್ಟಿ(BSP), ಇನ್ನೇನು ಚಿಗುರಿ ಮರವಾಗಬೇಕು ಅನ್ನೋವಷ್ಟರಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡ ನಂತರ, ಸಂಪೂರ್ಣವಾಗಿ ನೆಲ ಕಚ್ಚಿತ್ತು. ಹೀಗೆ ಜೆಡಿಎಸ್ ಜೊತೆಗೆ ಯಾವ ಪಕ್ಷ ಮೈತ್ರಿ ಮಾಡಿಕೊಂಡರೂ ಆ ಪಕ್ಷ ತೀವ್ರ ಹಿನ್ನಡೆ ಅನುಭವಿಸುತ್ತಿರುವುದನ್ನು ಗಮನಿಸಬಹುದು. ಸದ್ಯ ರಾಜ್ಯದಲ್ಲೂ ಇಂತಹದ್ದೊಂದು ಸನ್ನಿವೇಶ ಸೃಷ್ಟಿಯಾಗುತ್ತಿದೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿತು. ಹೀಗಾಗಿ ರಾಜ್ಯ ಬಿಜೆಪಿ ದುರ್ಬಲವಾಗಿದೆ ಎಂದು ಭಾವಿಸಿದ ಹೈಕಮಾಂಡ್ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸಲು ಮುಂದಾಗಿತ್ತು. ಆದರೆ ವಾಸ್ತವವಾಗಿ ಜೆಡಿಎಸ್ ರಾಜ್ಯದಲ್ಲಿ ದುರ್ಬಲವಾಗಿದ್ದು, ಬಿಜೆಪಿಗೆ ಜೆಡಿಎಸ್ ನಿಂದ ಆಗುವ ಲಾಭಕ್ಕಿಂತಲೂ ಹೊರೆಯೇ ಹೆಚ್ಚು ಅನ್ನೋದು ವಾಸ್ತವ. ಸದ್ಯ ಚುನಾವಣೆಯ ಒತ್ತಡದ ನಡುವೆ ಜೆಡಿಎಸ್ ಅನ್ನೋ ಅನಗತ್ಯ ಹೊರೆಯನ್ನು ರಾಜ್ಯ ಬಿಜೆಪಿ ಹೊತ್ತು ಚುನಾವಣೆ ಎದುರಿಸುವಂತಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ