ಮೈಸೂರು ದೊರೆಗಳು ಪಕ್ಷಾತೀತರಲ್ಲವೇ ? - Mahanayaka

ಮೈಸೂರು ದೊರೆಗಳು ಪಕ್ಷಾತೀತರಲ್ಲವೇ ?

dammapriya
15/03/2024

  • ದಮ್ಮಪ್ರಿಯ ಬೆಂಗಳೂರು

ಅಖಂಡ ಭಾರತ ದೇಶದಲ್ಲಿ ಕರ್ನಾಟಕದ  ಹೆಮ್ಮೆ ಬಹಳ ದೊಡ್ಡದು,   ಈ ನಾಡಿಗೆ ಕರ್ನಾಟಕ ಎಂದು ನಾಮಕರಣ ಮಾಡುವ ಮೊದಲು ಈ ನಾಡನ್ನು ಮೈಸೂರು ಸಂಸ್ಥಾನ ಎಂದು ಕರೆಯಲಾಗಿತ್ತು. ಮೈಸೂರಿಗೆ ಮೊದಲು ಈ ಹೆಸರು ಬರಲು  ಮಹಿಷಾಸುರ ಎಂಬ ರಾಜ ಆಳ್ವಿಕೆ ಮಾಡಿದ್ದರಿಂದ ಅದನ್ನು ಮಹಿಷಮಂಡಲ ಎಂದು ಕರೆಯುತ್ತಿದ್ದರು.  ಅದನ್ನು ನಂತರದ ದಿನಗಳಲ್ಲಿ ಮೈಸೂರು ಎಂದು ಮರು ನಾಮಕರಣ ಮಾಡಿ ಒಡೆಯರ ಸಂತತಿ ರಾಜ್ಯಭಾರ ಮಾಡಲು ಪ್ರಾರಂಭಿಸಿದರು.

ಮೈಸೂರು ಎಂದರೆ ಇಡೀ ಜಗತ್ತಿನಾದ್ಯಂತ ಸುದ್ಧಿ ಹಬ್ಬಿಸುವ “ಮೈಸೂರು ದಶರ” ಈ ನಾಡಿನ ಸಂಸ್ಕೃತಿಯ ಪ್ರತೀಕ.  ಅದಕ್ಕೆ ಇದನ್ನು ಸಾಂಸ್ಕೃತಿಕ ನಗರ ಎಂದೇ ಕರೆಯುತ್ತಾರೆ.  ಈ ನಾಡಿನಲ್ಲಿ ನಡೆಯುವ ಹಬ್ಬ ಜನಸಾಮಾನ್ಯರ ಹಬ್ಬವಾಗಿದೆ.  ಈ ಹಬ್ಬದ ಸಂದರ್ಭದಲ್ಲಿ ಯಾವುದೇ ಜಾತಿ, ಮತ, ಪಕ್ಷ, ಪಂಥ,ಲಿಂಗ ತಾರತಮ್ಯವಿಲ್ಲದೆ ಎಲ್ಲರೊಡನೆಯೂ ಬೆರೆತು ಬಾಳುವ ಹಬ್ಬ.  ಈ ಸಂಸ್ಥಾನದಲ್ಲಿ ಆಳ್ವಿಕೆ ಮಾಡಿದ ರಾಜ ಮಹಾರಾಜರು ಯಾವುದೇ ಜಾತಿಗೆ, ಧರ್ಮಕ್ಕೆ, ರಾಜಕೀಯ ಪಕ್ಷಕ್ಕೆ ಸೀಮಿತವಾಗಿರದೆ ಜನಸೇವೆಯೇ ಜನಾರ್ಧನ ಸೇವೆ ಎನ್ನುವ ಮನೋಭಾವವುಳ್ಳವರಾಗಿದ್ದರು.

ಮುಮ್ಮಡಿ ಕೃಷ್ಣರಾಜ ಒಡೆಯರ, ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಈ ನಾಡಿಗೆ ಅಪಾರವಾದದ್ದು ಮತ್ತು ಅಚ್ಚಳಿಯದೆ ನಿಂತಿದೆ.  ಕಾವೇರಿ ನೀರಿಗೆ ಕನ್ನಂಬಾಡಿ ಕಟ್ಟೆ ನಿರ್ಮಿಸಿ ಕೃಷ್ಣರಾಜ ಸಾಗರ ಎಂದು ನಾಮಕರಣ ಮಾಡಲಾಗಿದೆ. ಇದರ ಉದ್ದೇಶ ಇಲ್ಲಿನ  ಯಾವುದೇ ಜಾತಿ, ಧರ್ಮ, ರಾಜಕೀಯ ಪಕ್ಷಕ್ಕೆ ಸೀಮಿತವಾದುದ್ದಲ್ಲ. ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ ಎಲ್ಲ ಜನಾಂಗಕ್ಕೂ ಅನುಕೂಲವಾದದ್ದು, ಇದು ಶ್ರೀಮಂತರ ಆಶ್ರಯ ತಾಣ ಎನ್ನುವುದಕ್ಕಿಂದ ನೊಂದು ಬೆಂದು ಬಡತನದಿಂದ ಬಸವಳಿದು ಬಂದ ಜನರಿಗೆ ಜೀವಧಾರೆ ಎರೆದ ಮಹಾಲಯ.  ವಾಣಿವಿಲಾಸ ಸಾಗರ (ಮಾರಿಕಣಿವೆ ಡ್ಯಾಮ್)  ಮಾರ್ಕೊಂಡಹಳ್ಳಿ ಡ್ಯಾಮ್,  ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ,  ಹೆಸರಾಂತ ಮೈಸೂರು ಅರಮನೆ,  ಪ್ರಯಾಣದ ಸಲುವಾಗಿ ಚಾಮುಂಡಿ ಎಕ್ಸ್ಪ್ರೆಸ್ ರೈಲು ಇವೆಲ್ಲವೂ  ಜನಸಾಮಾನ್ಯರ ಹಿತದೃಷ್ಟಿಯಿಂದ ಮಾಡಿದ್ದೆ ಹೊರತು ಯಾವುದೇ ಒಂದು ಜಾತಿಗೆ ಒಂದು ಧರ್ಮಕ್ಕೆ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾದದ್ದು ಎಂದು ಹೇಳುವ ಒಂದು ಕುರುಹುಗಳಿಲ್ಲ.

ಅಂದಿನ ರಾಜ ಮಹಾರಾಜರುಗಳು  ಎಲ್ಲ ಜನಾಂಗವನ್ನು ಒಂದೇ ದೃಷ್ಠಿಯಿಂದ ಸಮಾನವಾಗಿ ನೋಡಬೇಕು ಎನ್ನುವ ಮನೋಭಾವ ಉಳ್ಳವರಾಗಿದ್ದರು. ಇತ್ತೀಚೆಗೆ ನಿಮಗೆಲ್ಲಾ ನಿಮ್ಮ ಅಜ್ಜ ಹೇಳಿದ  ಒಂದು ಕಥೆ  ನೆನಪಾಗಬಹುದು.  ತಾಯಿ ಅಲಮೇಲು ಮಂಗಮ್ಮ ಮೈಸೂರು ಮಹಾರಾಜರಿಗೆ ಶಾಪವನ್ನಿಟ್ಟು ಆತ್ಮಹತ್ಯೆ ಮಾಡಿಕೊಂಡರು ಎಂದು.  “ಮಾಲಂಗಿ ಮಡುವಾಗಿ, ತಲಕಾಡು ಮರಳಾಗಿ, ಮೈಸೂರು ಮಹಾರಾಜರಿಗೆ ಮಕ್ಕಳಾಗದೇ ಹೋಗಲಿ” ಎನ್ನುವ ಸತ್ಯ ಇವತ್ತಿಗಾಗಲೇ ಸುಳ್ಳಾಗಿಹೋಗಿದೆ ಎನ್ನಬಹುದು.

ಯುವರಾಜರು  ಮಹಾರಾಜರ ಪಟ್ಟಕ್ಕೆ ಬಂದ ನಂತರ  ಅಲಮೇಲು ಮಂಗಮ್ಮನ ಶಾಪವು ಸುಳ್ಳಾಯಿತು ಎಂದು ಜನಸಾಮಾನ್ಯರು ಮಾತನಾಡುವಂತಾಯಿತು.  ಇನ್ನು ಒಂದು ಹೆಜ್ಜೆ ಮುಂದೆ ನಡೆಯುವುದಾದರೆ  ಕಳೆದ  ವರ್ಷ ದಶರ ಹಬ್ಬದಲ್ಲಿ ತಾಯಿ  ಚಾಮುಂಡಿಯ  ಮೆರವಣಿಗೆ ನಡೆಯಬೇಕೋ  ಅಥವಾ  ಮೈಸೂರನ್ನಾಳಿದ ದ್ರಾವಿಡ ಮಹಾರಾಜ ಮಹಿಷಾಸುರ ಎನ್ನುವ ಪೂರ್ವಿಕರ  ಮೆರವಣಿಗೆ ನಡೆಸಬೇಕೋ  ಎನ್ನುವ ಗೊಂದಲವನ್ನು ಜನಸಾಮಾನ್ಯರಲ್ಲಿ  ಸೃಷ್ಠಿಸಿ  ಇಡೀ ಸಾಂಸ್ಕೃತಿಕ ನಗರವನ್ನೇ ಕೋಮುಗಲಭೆಗೆ ಸಿಕ್ಕಿ ನರಳುವಂತೆ ಮಾಡಲಾಯಿತು.  ನಾಡಿನ ಹಬ್ಬದಲ್ಲಿಯೂ ಗಲಭೆ ಎಬ್ಬಿಸಿ  ನಾಡಿನ ಕೀರ್ತಿಗೆ ಅಪಮಾನ ಮಾಡುವ ಪುಂಡ ರಾಜಕಾರಣಿಗಳು ಇಲ್ಲಿ ಕಾರಣೀಭೂತರಾದರು ಎಂದರು ತಪ್ಪಾಗಲಾರದು. ಧರ್ಮ ಎನ್ನುವ ಅಮಲು ಪುಂಡ ರಾಜಕಾರಣಿಗಳ ಮದವೇರಿ ಕುಣಿಯುವಾಗ ಈ ನಾಡಿಗೆ ಇದು ಮುಂದೆ ಬಂದೊದಗಬಹುದಾದ ದುರಂತ ಎಂದರು ತಪ್ಪಾಗಲಾರದು.

ನಿರ್ಮಲವಾದ, ಜಾತ್ಯತೀತವಾದ, ಧರ್ಮಾತೀತವಾದ,  ಪಕ್ಷಾತೀತವಾದ ಈ ಮಹಿಷಮಂಡಲದ  ಸಾಂಸ್ಕೃತಿಕ ನಾಡ ಹಬ್ಬಕ್ಕೆ ಯುವರಾಜರ ಆಡಳಿತ ಸುಬೀಕ್ಷೆಯಿಂದ ಇರುವಾಗ,  ರಾಜರ ಕೈಗಳಿಗೆ  ಜಾತಿಯ, ಧರ್ಮದ, ರಾಜಕೀಯ ಪಕ್ಷದ ಹೊಲಸನ್ನು  ಬಳಿಯಲು ಕೆಲವು ಪೀತ ಮನಸುಗಳು ಇತ್ತೀಚೆಗೆ ಪ್ರಯತ್ನಿಸುತ್ತಿವೆ ಎಂದರೆ ತಪ್ಪಾಗಲಾರದೇನೋ.  ಕಳೆದ ಒಂದು ವಾರದಿಂದ ನಡೆಯುತ್ತಿರುವ ರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ  ರಾಜರನ್ನು ಚುನಾವಣೆಗೆ ಎಳೆದು  ಒಂದು ಪಕ್ಷಕ್ಕೆ ಸೀಮಿತಗೊಳಿಸಿದ್ದೆ ಆದರೆ  ಅರಮನೆಯ ಮೇಲೆ  ಸರ್ವಜನಾಂಗದ  ಶಾಂತಿಯ ಭಾವುಟ ಹಾರಾಡುವ ಕನಸು ನುಚ್ಚು ನೂರಾಗಬಹುದು.  ಕುವೆಂಪುರವರ  ಸರ್ವಜನಾಂಗದ  ಶಾಂತಿಯ ತೋಟ  ಎನ್ನುವುದು  ಒಂದು ಧರ್ಮಕ್ಕೆ ಒಂದು ಜಾತಿಗೆ ಒಂದು ಪಕ್ಷಕ್ಕೆ ಸೀಮಿತವಾಗಬಹುದು.

ಇಂತಹ ರಾಜಕೀಯ ಸಂದರ್ಭದಲ್ಲಿ  ಅರಮನೆಯನ್ನು ಯಾವುದೇ ಒಂದು ಪಕ್ಷಕ್ಕೆ, ಒಂದು ಜಾತಿಗೆ, ಒಂದೇ  ಧರ್ಮಕ್ಕೆ ಸೀಮಿತಗೊಳಿಸಬೇಡಿ.  ನಿಮ್ಮ ಕೈಯಲ್ಲಿ  ಒಂದು ಕೆ ಆರ್ ಎಸ್,  ಒಂದು  ವಿಶ್ವವಿದ್ಯಾಲಯ,  ಒಂದು ಕಾರ್ಖಾನೆ,  ಒಂದು ಹಾಸ್ಪಿಟಲ್,  ಒಂದು ಅರಮನೆ,  ನಿರ್ಮಿಸಲು ಸಾಧ್ಯವಾಗುವುದಿಲ್ಲ.  ಸಾದ್ಯವಾದರೂ ಅದು ನಿಮ್ಮ ಪೂರ್ವಿಕರ ಮನೋಇಚ್ಛೆಯಂತೆ  ಜ್ಯಾತ್ಯಾತೀತ, ಧರ್ಮಾತೀತ ,  ಪಕ್ಷಾತೀತವಾಗಿರಲು ಸಾಧ್ಯವೇ ಇಲ್ಲಾ.  ಈಗಾಗಲೇ ದೇಶದಲ್ಲಿ ಬ್ಯಾಂಕು ಹಾಗು ಸರ್ಕಾರೀ ಕಛೇರಿಗಳಲ್ಲಿ ಕರೆಯುತ್ತಿದ್ದ  ಕೇಂದ್ರ ಸರ್ಕಾರ ಎನ್ನುವ ಮಾತು ಮಾಯವಾಗಿ  ವ್ಯಕ್ತಿ ಸರ್ಕಾರ ಎಂದು ಕರೆಯಲಾಗುತ್ತಿದೆ.  ಇಂತಹ  ಭಾಷಾ ರಾಜಕಾರಣದಲ್ಲಿ  ಮುಂದೊಂದು ದಿನ  ಮೈಸೂರು ಅರಮನೆ ಎನ್ನುವ ಬದಲು ಅದೊಂದು ಒಂದು  ಪಕ್ಷದ ಅರಮನೆ ಎನ್ನುವಂತಾಗಬಾರದು. ಮಹಾರಾಜರು ನಿರ್ಮಿಸಿದ  ಮೈಸೂರು ಬ್ಯಾಂಕ್ ಇಂದು ಇತಿಹಾಸದ ಪುಟಗಳಿಂದ ಅಳಿಸಿಹಾಕುವ ಕೆಲಸ ಈಗಾಗಲೇ ನಡೆದಿದ್ದು,  ಮುಂದೊಂದು ದಿನ ಮೈಸೂರು ದಸರಾ ,  ನಾಡದೇವಿಯ ಹಬ್ಬ,  ಸಾಂಸ್ಕೃತಿಕ ನಗರವೆನ್ನುವ ಹೆಮ್ಮೆಯಿಂದ ಮುಂದಿನ ಪೀಳಿಗೆ ಓದಲು ಸಾಧ್ಯವಾಗದಂತೆ  ನಿರ್ನಾಮ ಮಾಡುವ ಎಲ್ಲ ಹುನ್ನಾರಗಳು ರಾಜಕೀಯ ಕಪಿ ಮುಷ್ಠಿಯಲ್ಲಿ ಸಿಲುಕಬಾರದು ಎನ್ನುವುದು ನಮ್ಮ ಭಾವನೆ.  ಅಂತಹ ಕರಾಳ ದಿನಗಳನ್ನು ನಾಡಿನ ಜನತೆ ಕಣ್ಣಾರೆ ಕಾಣಬಾರದು ಎನ್ನುವ ಮಹದಾಸೆ ಕನ್ನಡಿಗರದ್ದು.  ಧರ್ಮದ    ಅಮಲಿನ ಅಫೀಮಿನಲ್ಲಿ  ನಿಲ್ಲಬಾರದರು. ಶುದ್ಧ ಮತ್ತು ಪವಿತ್ರತೆಯಿಂದ ಕೂಡಿದ್ದರೆ ಅದಕ್ಕೊಂದು ಮೆರುಗು, ನಮ್ಮ ನಾಡ ಹಬ್ಬಕ್ಕೊಂದು ಸೊಬಗು.

ದೇಶದಲ್ಲಿ ಕೋಮುಗಲಭೆ ಎಬ್ಬಿಸಿ,  ಬಾಯಿ ಮುಚ್ಚಿ ಮೌನ ವಹಿಸುವ ಇಕ್ಕಮತ್ತಿನ ರಾಜಕಾರಣ ಸತತವಾಗಿ ನಡೆಯುತ್ತಲೇ ಇದೆ. ರಾಜಕೀಯ ಗುಂಗಲ್ಲಿ ಸಿಲುಕಿ  ಒಂದು ಕೋಮಿನ ರಾಜರಾಗುವುದು ಮೂರು ಕಾಸಿಗೂ ಬೆಲೆಯಿಲ್ಲದ ರಾಜರಾಗಿಬಿಡುತ್ತೇವೆ. ಯುವರಾಜರಿಗೆ  ರಾಜಕೀಯ ಪ್ರವೇಶ ಬೇಡ ಎನ್ನುವುದು ನಾಡಿನ ಜನರ ಅಭಿಪ್ರಾಯ,  ನಾಡಿಗೆ ಇರುವ ಒಗ್ಗಟ್ಟಿನ ಸಂಕೇತವೇ  ನಾಡಹಬ್ಬ ಅದು ನಮ್ಮ  ಮೈಸೂರು ದಶರ ಹಬ್ಬ. ಇದನ್ನು ಕದಡದೆ ನಮ್ಮ  ಹಿರಿಯರ ಸತ್ಯದ ಕೆಲಸಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತೀರಿ ಎನ್ನುವುದು ನಾಡಿನ ಸಮಸ್ತ ಕನ್ನಡಿಗರ ಭರವಸೆ.

ಮುಂದಿನ ದಶರ ಒಂದು ಪಕ್ಷಕ್ಕೆ,  ಅರಮನೆ ಒಂದು ಧರ್ಮಕ್ಕೆ, ಹಾಗು ರಾಜರೊಡನೆ ತಿರುಗಾಡುವವರು ಒಂದು ಜಾತಿಗೆ ಸೀಮಿತವಾಗಬಾರದು ಎನ್ನುವುದು ಕನ್ನಡಿಗರ ಅಭಿಪ್ರಾಯ. ನಾಲ್ವಡಿ ಕೃಷ್ಣರಾಜ ಒಡೆಯರ ನಂತರ ನಾಡಿನ ಜನರು ರಾಜರಿಂದಾಗಲಿ, ಅರಮನೆಯಿಂದಾಗಲಿ  ಏನನ್ನು ನಿರೀಕ್ಷೆ ಮಾಡುತ್ತಿಲ್ಲ. ಆದರೆ ಅವರ ಭಾವನೆಗಳು ಒಮ್ಮೆ ಕದಡಬೇಡಿ. ಇದರಿಂದ  ರಾಜರು ನೆಮ್ಮದಿಯಾಗಿ ಸಮಾಜ ಸೇವೆ ಮಾಡಲು ಸಾಧ್ಯವೇ ಇಲ್ಲ. ಒಮ್ಮೆ ನೀವೇ ಯೋಚಿಸಿ. ಇಂದಿನ ರಾಜಕಾರಣ ಜನಪರ ರಾಜಕಾರಣ ಎನ್ನುವ ಬದಲು ವ್ಯಕ್ತಿಗಳ ಪ್ರತಿಷ್ಠೆಯ, ತಮ್ಮ ತಮ್ಮ ಜನಾಂಗದ ಉದ್ಧಾರದ ಹಿತದೃಷ್ಠಿಯ  ರಾಜಕಾರಣ,  ಧರ್ಮದ ಅಮಲಿನ ರಾಜಕಾರಣ ನಮಗೆ ಬೇಡವಾಗಿದೆ. ಇದರಿಂದ ಮೈಸೂರು ಮಹಾರಾಜಾ ಹೊರತಾಗಿ ನಾಡಿನ ಹಬ್ಬಕ್ಕೆ, ನಾಡಿನ ಘನತೆಗೆ, ನಾಡಿನ ಗೌರವಕ್ಕೆ ಪಾತ್ರರಾದರೆ ಅಷ್ಟೇ ಸಾಕು, ಅದೇ ಈ ನಾಡಿಗೆ ಸಮೃದ್ಧಿ,  ಸಂಪ್ರದಾಯ, ಸಾಂಸ್ಕೃತಿಕ ಆಚರಣೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ