ಬಿಜೆಪಿಯ ಬ್ಯಾನರ್ ನಲ್ಲಿ ಎನ್.ಮಹೇಶ್ ಚಿತ್ರ! | ಎನ್.ಮಹೇಶ್ ಬಿಜೆಪಿಗೆ ಸೇರ್ಪಡೆಯಾಗುತ್ತಾರಾ? - Mahanayaka
3:01 PM Thursday 12 - December 2024

ಬಿಜೆಪಿಯ ಬ್ಯಾನರ್ ನಲ್ಲಿ ಎನ್.ಮಹೇಶ್ ಚಿತ್ರ! | ಎನ್.ಮಹೇಶ್ ಬಿಜೆಪಿಗೆ ಸೇರ್ಪಡೆಯಾಗುತ್ತಾರಾ?

11/01/2021

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಸಚಿವ ಸ್ಥಾನಾಕಾಂಕ್ಷಿಗಳು ಒಂದೆಡೆ ಲಾಬಿ ಮಾಡುತ್ತಿದ್ದರೆ, ಇತ್ತ ಸಚಿವ ಸ್ಥಾನದ ವಿಚಾರದಲ್ಲಿ ಚರ್ಚೆಯಲ್ಲಿಯೇ ಇಲ್ಲದ ಮಾಜಿ ಸಚಿವ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರಿಗೂ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇತ್ತೀಚೆಗಷ್ಟೆ, “ಸಚಿವ ಸ್ಥಾನ ದೊರೆತರೆ ಬಿಜೆಪಿಗೆ ತಾನು ಸೇರ್ಪಡೆಯಾಗುತ್ತೇನೆ” ಎಂದು ಎನ್.ಮಹೇಶ್ ಅವರು ಹೇಳಿದ್ದಾರೆನ್ನಲಾಗಿರುವ ಸುದ್ದಿ ನಾನಾ ಸ್ವರೂಪ ಪಡೆದುಕೊಂಡು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಇದೀಗ ರಾಜ್ಯ ಬಿಜೆಪಿ ನಾಯಕರ ಬ್ಯಾನರ್ ನಲ್ಲಿ ಎನ್.ಮಹೇಶ್ ಅವರ ಫೋಟೋಗೆ ಪ್ರಮುಖ ಸ್ಥಾನ ನೀಡಲಾಗಿರುವ ಬ್ಯಾನರ್ ವೊಂದು ರಾರಾಜಿಸುತ್ತಿದೆ. ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಎನ್.ಮಹೇಶ್ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರಾ? ಎನ್ನುವ ಕುತೂಹಲ ಹೆಚ್ಚಿದೆ.

ಬಿಎಸ್ ಪಿಯಿಂದ ಉಚ್ಛಾಟನೆಯಾದ ಬಳಿಕ ಕೊಳ್ಳೇಗಾಲ ಕ್ಷೇತ್ರ ಅಭಿವೃದ್ಧಿಗಾಗಿ ತಾನು ಬಿಜೆಪಿಗೆ ಬೆಂಬಲ ನೀಡುತ್ತೇನೆ ಎಂದು ಎನ್.ಮಹೇಶ್ ಅವರು ಈ ಹಿಂದಿನಿಂದಲೂ ಹೇಳಿಕೆ ನೀಡುತ್ತಿದ್ದರು. ವಿಧಾನಸಭೆಯಲ್ಲಿ ಕೂಡ ತಾನು ಸ್ವತಂತ್ರ ಶಾಸಕ ಎಂದು ಘೋಷಿಸಿದ್ದರು. ಈ ನಡುವೆಎನ್.ಮಹೇಶ್ ಅವರು ನೂತನ ಪಕ್ಷ ಸ್ಥಾಪನೆ ಮಾಡುತ್ತಾರೆ ಎಂಬ ನಿರೀಕ್ಷೆಗಳೂ ಇದ್ದವು. ಈ ನಡುವೆ ಎನ್.ಮಹೇಶ್ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಇದಕ್ಕೆ  ಪೂರಕವಾಗಿ ಬಿಜೆಪಿಯ ಪ್ರಮುಖ ನಾಯಕರ ಫೋಟೋದ ಜೊತೆಗೆ ಎನ್.ಮಹೇಶ್ ಅವರ ಫೋಟೋ ರಾರಾಜಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳು ಎನ್.ಮಹೇಶ್ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆಯೇ ಎನ್ನುವ ಅನುಮಾನಗಳಿಗೆ ಕಾರಣವಾಗಿದೆ.

ಮೂಲಗಳ ಪ್ರಕಾರ ಎನ್.ಮಹೇಶ್ ಅವರ ಮುಂದಿನ ರಾಜಕೀಯ ನಡೆ ಏನು ಎನ್ನುವುದು ಶೀಘ್ರವೇ  ತಿಳಿದು ಬರಲಿದೆ ಎಂದು ಹೇಳಲಾಗುತ್ತಿದೆ. ಬಹುಶಃ ಎನ್.ಮಹೇಶ್ ಅವರು ಕೂಡ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ ಎಂದೇ ಹೇಳಬಹುದಾಗಿದೆ. ಇದೇ ಸಂದರ್ಭದಲ್ಲಿ ಎನ್.ಮಹೇಶ್ ಅವರೇ ಎಲ್ಲದಕ್ಕೂ ಅಂತಿಮ ತೆರೆ ಎಳೆಯುವವರೆಗೂ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರಾ? ಸ್ವತಂತ್ರ ಶಾಸಕರಾಗಿಯೇ ಸಚಿವ ಸ್ಥಾನ ಪಡೆದು ಮುಂದುವರಿಯುತ್ತಾರಾ? ಎಂದು ಹೇಳುವುದು ಕಷ್ಟ ಸಾಧ್ಯವಾಗಿದೆ.

ಇತ್ತೀಚಿನ ಸುದ್ದಿ