ನಡು ರಸ್ತೆಯಲ್ಲಿ ವೃದ್ಧೆಯನ್ನು ಇಳಿಸಿ ಹೋದ ಆಂಬುಲೆನ್ಸ್ ಚಾಲಕ!
ಕೊಡಗು: ಆಂಬುಲೆನ್ಸ್ ಚಾಲಕನೋರ್ವ ವೃದ್ಧೆಯೊಬ್ಬರನ್ನು ನಡು ರಸ್ತೆಯಲ್ಲಿ ಆಂಬುಲೆನ್ಸ್ ನಿಂದ ಇಳಿಸಿ ಹೋದ ಅಮಾನವೀಯ ಘಟನೆ ಕೊಡಗಿನಲ್ಲಿ ನಡೆದಿದ್ದು, ಕೊರೊನಾದಿಂದ ಗುಣಮುಖರಾದ 60ರ ವೃದ್ಧೆಯನ್ನು ಅವರ ಮನೆಯಿಂದ 2 ಕಿ.ಮೀ. ದೂರದಲ್ಲಿ ಇಳಿಸಿ ಆಂಬುಲೆನ್ಸ್ ಚಾಲಕ ವಾಪಸ್ ಹೋಗಿದ್ದಾನೆ.
ಕೊವಿಡ್ ಸೋಂಕಿನ ಹಿನ್ನೆಲೆಯಲ್ಲಿ ಮಡಿಕೇರಿಯ ಕೊವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 60 ವರ್ಷದ ಪೊನ್ನಮ್ಮ ಎಂಬವರು 12 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದು ಕೊರೊನಾ ಗೆದ್ದಿದ್ದರು. ಕೊರೊನಾ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್ ಮೂಲಕ ಮನೆಗೆ ಕಳುಹಿಸಿದ್ದಾರೆ. ಆದರೆ ಆಂಬುಲೆನ್ಸ್ ಚಾಲಕ ರಸ್ತೆ ಮಧ್ಯೆ ವೃದ್ಧೆಯನ್ನು ಇಳಿಸಿ, ವಾಪಸ್ ಹೋಗಿದ್ದಾನೆ.
ಕೊರೊನಾ ಸೋಂಕು ಹೋದರೂ ಆ ಬಳಿಕ ತೀವ್ರ ಸುಸ್ತು ಆವರಿಸಿರುತ್ತದೆ. ಒಂದೆಡೆ ಈ ಸುಸ್ತುನ್ನು ಸಹಿಸಿಕೊಂಡು ಮನೆಗೆ ನಡೆಯಲು ವೃದ್ಧೆ ಕಷ್ಟಪಡುತ್ತಿದ್ದರು. ಈ ವೇಳೆ ಸ್ಥಳೀಯರು ಅವರನ್ನು ಗಮನಿಸಿ ಮನೆಯವರಿಗೆತಿಳಿಸಿದ್ದು, ಆ ಬಳಿಕ ಮನೆಯವರು ಅವರನ್ನು ಕರೆದುಕೊಂಡು ಹೋಗಿದ್ದಾರೆ. ಆಂಬುಲೆನ್ಸ್ ಚಾಲಕನ ಈ ದುರ್ನಡತೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.