ನಾಗಮಂಗಲ ಗಲಾಟೆ 52 ಜನರ ಬಂಧನ: ಗೃಹ ಸಚಿವ ಪರಮೇಶ್ವರ - Mahanayaka
5:37 PM Tuesday 17 - September 2024

ನಾಗಮಂಗಲ ಗಲಾಟೆ 52 ಜನರ ಬಂಧನ: ಗೃಹ ಸಚಿವ ಪರಮೇಶ್ವರ

g parameshwar
12/09/2024

ಬೆಂಗಳೂರು: ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಗಲಾಟೆಯನ್ನು ಪೊಲೀಸರು ಕೂಡಲೇ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಘಟನೆ ಆಗಬಾರದಿತ್ತು. ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ಅಂತ್ಯವಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಘಟನೆಯನ್ನು ಪೊಲೀಸರು ಕೂಡಲೇ ನಿಯಂತ್ರಣಕ್ಕೆ ತಂದಿದ್ದಾರೆ. ದೊಡ್ಡ ಗಲಾಟೆಎಂದರು.

ಮೆರವಣಿಗೆ ವೇಳೆ ಕಲ್ಲು ತೂರಾಟವಾದಾಗ ಒಬ್ಬರಿಗೊಬ್ಬರಿಗೆ ಘರ್ಷಣೆ ಮಾಡಿಕೊಂಡಿದ್ದಾರೆ. ಆನಂತರ ಎಲ್ಲವೂ ಸರಿ ಹೋಯ್ತು ಅಂತ ವಾಪಸ್ ಹೋಗುವಾಗ, ಕೆಲವರು ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ. ಅಷ್ಟರೊಳಗೆ ಪೊಲೀಸರು ಎಚ್ಚೆತ್ತುಕೊಂಡು ಹತೋಟಿಗೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.


Provided by

ಜಿಲ್ಲಾ ಪೊಲೀಸ್ ಅಧೀಕ್ಷಕರು, ಐಜಿಪಿ, ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದೇನೆ. ಘರ್ಷಣೆ ಮಾಡಿಕೊಂಡಿದ್ದಾರೆ, ಈ ಘಟನೆಯನ್ನು ಕೋಮು ಗಲಭೆ ಅಂತ ಹೇಳಲಾಗುವುದಿಲ್ಲ. ಇದನ್ನು ಹೆಚ್ಚು ಬೆಳೆಯಲು ಬಿಡುವುದಿಲ್ಲ, ಪೊಲೀಸರು ಬಿಟ್ಟಿಲ್ಲ. ಹೆಚ್ಚು ಪ್ರಚಾರ ನೀಡುವುದು ಬೇಡ ಎಂದು ಮನವಿ ಮಾಡಿದರು.

ಘಟನೆಯಲ್ಲಿ ಹೆಚ್ಚು ಜನರಿಗೆ ಗಾಯಗಳಾಗಿಲ್ಲ. ಗಲಭೆಗೆ ಸಂಬಂಧಿಸಿದಂತೆ ಎರಡು ಗುಂಪಿನ ಒಟ್ಟು 52 ಜನರನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅದನ್ನು ಆಧರಿಸಿ ಯಾರೆಲ್ಲ ಕಲ್ಲು ತೂರಿದ್ದಾರೆ, ಬೆಂಕಿ ಹಾಕಿದ್ದಾರೆ ಅವರೆಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸರಿಗು ಕಲ್ಲು ಏಟು ಬಿದ್ದಿದ್ದು, ಓರ್ವ ಏಸ್ಐ ಗಾಯಗೊಂಡಿದ್ದಾರೆ. ಇದರಲ್ಲಿ ರಾಜಕೀಯ ಪ್ರಚೋದನೆ ರೀತಿ ಕಾಣುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಘಟನೆಗೆ ಅತಿಯಾದ ಓಲೈಕೆಯೇ ಕಾರಣ ಎಂದಿರುವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಅವರು ಈ ಹಿಂದೆ ಯಾವ ರೀತಿ ಓಲೈಕೆ ಮಾಡುತ್ತಿದ್ದರೋ ಗೊತ್ತಿಲ್ಲ ಎಂದರು.

ಇದರಲ್ಲಿ ರಾಜಕೀಯ ಮಾಡುವುದು ಬೇಡ. ಪೊಲೀಸರಿಗೆ ಬಿಟ್ಟರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಕಾನೂನು ಸಲಹೆ ಕೊಡುವುದಾದರೆ ಸ್ವಾಗತ ಮಾಡುತ್ತೇನೆ. ಘಟನೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದರ ಕುರಿತು ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ