ನಾಗರ ಪಂಚಮಿ ದಿನವೇ ಶಾಕ್ ನೀಡಿದ ಪ್ರವಾಹ: ಸುಬ್ರಹ್ಮಣ್ಯ ದೇಗುಲ ಪ್ರವೇಶಕ್ಕೆ ಭಕ್ತರಿಗೆ ನಿಷೇಧ
ಸುಬ್ರಹ್ಮಣ್ಯ: ಭಾರೀ ಮಳೆಗೆ ಕುಕ್ಕೆ ಸುಬ್ರಹ್ಮಣ್ಯ ಅಕ್ಷರಶಃ ನಲುಗಿ ಹೋಗಿದೆ. ಮಳೆಗೆ ಆದಿಸುಬ್ರಹ್ಮಣ್ಯ ದೇವಸ್ಥಾನದ ಒಳಗೆ ನೀರು ನುಗ್ಗಿದೆ. ಮತ್ತೊಂದೆಡೆ ದರ್ಪಣ ತೀರ್ಥ ನದಿಯ ನೀರು ಸುಬ್ರಹ್ಮಣ್ಯದ ಮುಖ್ಯ ದೇವಸ್ಥಾನಕ್ಕೂ ನುಗ್ಗಿದೆ.
ದೇವರಗದ್ದೆ ಹಾಗೂ ಮಾನಾಡಿನ ನದಿಗಳು ಉಕ್ಕಿ ಹರಿದು ಹಲವು ಮನೆಗಳು ಜಲಾವೃತಗೊಂಡಿದೆ. ನೂಚಿಲದ ಕೆಲವು ಮನೆಗಳಿಗೂ ನೀರು ನುಗ್ಗಿದೆ. ಕುಮಾರಧಾರ ಸೇತುವೆ ಹೊರತು ಪಡಿಸಿ ಇನ್ನುಳಿದ ಎಲ್ಲಾ ಸೇತುವೆಗಳು ಮುಳುಗಡೆಯಾಗಿದ್ದಲ್ಲದೇ ಅಪಾಯ ಮಟ್ಟ ಮೀರಿದೆ. ಕುಮಾರಧಾರೆಯೂ ಮುಳುಗಡೆಯಾದರೆ ಯಾವುದೇ ರಸ್ತೆ ಸಂಪರ್ಕವಿಲ್ಲದೆ ಕುಕ್ಕೆ ಸುಬ್ರಹ್ಮಣ್ಯವು ದ್ವೀಪವಾಗುವ ಸಾಧ್ಯತೆಗಳಿವೆ.
ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸುತ್ತಲಿನ ಪ್ರದೇಶದಲ್ಲಿ ನಾಗರ ಪಂಚಮಿಯ ಹಿಂದಿನ ದಿನ ಸುರಿಯುತ್ತಿರುವ ವರ್ಷಧಾರೆಗೆ ಸ್ಥಳೀಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕುಕ್ಕೆ ಸುಬ್ರಹ್ಮಣ್ಯ ದೇಗುಲ ದರ್ಶನಕ್ಕೆ ಮುಂದಿನ ಎರಡು ದಿನ ಬಾರದಂತೆ ಮನವಿ ಮಾಡಿದೆ. ಎರಡು ದಿನಗಳ ದೇಗುಲ ಪ್ರವೇಶಕ್ಕೆ ಭಕ್ತರಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಶಾಲಾ ಕಾಲೇಜುಗಳಿಗೆ ರಜೆ:
ಭಾರೀ ಮಳೆ ಹಿನ್ನಲೆಯಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ರಜೆ ಘೋಷಿಸಿದ್ದಾರೆ.
ಕಡಬ, ಸುಳ್ಯ ತಾಲೂಕಿನಲ್ಲಿ ನಿನ್ನೆಯಿಂದ ಭಾರೀ ಮಳೆ ಸುರಿಯುತ್ತಿತ್ತು. ಸುಬ್ರಹ್ಮಣ್ಯ ಭಾಗದಲ್ಲಿ ಜನಜೀವನ ಅಸ್ತವ್ಯಸ್ಥ ಗೊಂಡಿದೆ. ನಿನ್ನೆ ರಾತ್ರಿನೇ ಕಡಬಕ್ಕೆ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ.ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka