ಪಂಚಾಯತ್ ಚುನಾವಣೆ: ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಲು ಒಪ್ಪದ ಅಧಿಕಾರಿಯ ಬರ್ಬರ ಹತ್ಯೆ
ಲಕ್ನೋ: ನಕಲಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ನಿರಾಕರಿಸಿದ ಬೂತ್ ಮಟ್ಟದ ಅಧಿಕಾರಿಯೊಬ್ಬರನ್ನು ಹತ್ಯೆ ಮಾಡಲಾದ ಘಟನೆ ಉತ್ತರಪ್ರದೇಶದ ಬರ್ಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೂರಜ್ ಪಾಲ್ ವರ್ಮಾ ಹತ್ಯೆಗೀಡಾದ ಅಧಿಕಾರಿಯಾಗಿದ್ದಾರೆ. ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಅಧಿಕಾರಿಯಾಗಿ ಇವರನ್ನು ನಿಯೋಜನೆ ಮಾಡಲಾಗಿತ್ತು. ಇಲ್ಲಿನ ಪ್ರಭಾವಿ ವ್ಯಕ್ತಿ ಸಂಪಲ್ಲವ್ ಜೈಸ್ವಾಲ್ ಈ ದುಷ್ಕೃತ್ಯ ಎಸಗಿದ್ದಾನೆ.
ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಲು ನಿರಾಕರಿಸಿದ್ದಕ್ಕಾಗಿ ಸೂರಜ್ ಅವರನ್ನು ಕ್ರೂರವಾಗಿ ಥಳಿಸಲಾಗಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸೂರಜ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಆರೋಪಿ ಜೈಸ್ವಾಲಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕರಾಗಿರುವ ಸೂರಜ್ ಅವರು ಚುನಾವಣಾಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಆದರೆ ಇವರಿಗೆ ಪೊಲೀಸ್ ಭದ್ರತೆಯೂ ಒದಗಿಸದೇ ಅಮಾನುಷ ಕೊಲೆಗೆ ಸ್ಥಳೀಯಾಡಳಿತ ಕಾರಣವಾಗಿದೆ.