8ನೇ ತರಗತಿ ಪಾಸ್ ಆದ ನಕಲಿ ಡಾಕ್ಟರ್ ನಿಂದ ಶಸ್ತ್ರ ಚಿಕಿತ್ಸೆ | ತಾಯಿ-ಮಗು ಸಾವು
ಉತ್ತರಪ್ರದೇಶ: ನಕಲಿ ವೈದ್ಯನೋರ್ವ ರೇಜರ್ ಬ್ಲೇಡ್ ನಿಂದ ಶಸ್ತ್ರ ಚಿಕಿತ್ಸೆ ನಡೆಸಿದ್ದು, ತೀವ್ರವಾಗಿ ರಕ್ತಸ್ರಾವಗೊಂಡು ತಾಯಿ ಮಗು ಸಾವನ್ನಪ್ಪಿದ ಅಮಾನವೀಯ ಘಟನೆ ಉತ್ತರಪ್ರದೇಶ ಆಸ್ಪತ್ರೆಯಲ್ಲಿ ನಡೆದಿದೆ.
ರಾಜಾರಾಮ್ ಅವರ ಪತ್ನಿ 35 ವರ್ಷ ವಯಸ್ಸಿನ ಪೂನಂ ಹಾಗೂ ಅವರ ನವಜಾತ ಶಿಶು ಸಾವನ್ನಪ್ಪಿದವರಾಗಿದ್ದು, ಗುರುವಾರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೂಲಗಿತ್ತಿಯ ಬಳಿಗೆ ಕರೆದೊಯ್ದಿದ್ದರು. ಇಲ್ಲಿ ದಿಹ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲು ಹೇಳಿದರು . ಆಕೆಯ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ 140 ಕಿ.ಮೀ ದೂರದ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಿದ್ದರಿಂದ ದೀಹ ಗ್ರಾಮದಲ್ಲಿರುವ ಮಾ ಶಾರದಾ ಆಸ್ಪತ್ರೆ ದಾಖಲಿಸಲಾಗಿತ್ತು.
ಮಾ ಶಾರದಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ತೀವ್ರವಾಗಿ ರಕ್ತಸ್ರಾವವಾದ ಕಾರಣ ತಾಯಿ ಮಗು ಸಾವನ್ನಪ್ಪಿದೆ. ಈ ಸಂಬಂಧ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
8ನೇ ತರಗತಿ ಪಾಸ್ ಆಗಿದ್ದ ನಕಲಿ ವೈದ್ಯ ಈ ಶಸ್ತ್ರ ಚಿಕಿತ್ಸೆ ನಡೆಸಿದ್ದಾನೆ ಎನ್ನುವುದು ತಿಳಿದು ಬಂದಿದೆ. ಘಟನೆ ಸಂಬಂಧ ನಕಲಿ ವೈದ್ಯ ಮತ್ತು ಆಸ್ಪತ್ರೆಯ ಕಾರ್ಯನಿರ್ವಾಹಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಚತುರ್ವೇದಿ ತಿಳಿಸಿದ್ದಾರೆ.