ವಿಶೇಷ ಪ್ಯಾಕೇಜ್ ಎಲ್ಲಿ ಎಂದು ಪ್ರಶ್ನಿಸಿದ ಬಿಜೆಪಿ ಕಾರ್ಯಕರ್ತಗೆ ನಳಿನ್ ಕುಮಾರ್ ನ್ನು ಕೇಳಿ ಎಂದ ಸದಾನಂದ ಗೌಡ!
ಬೆಂಗಳೂರು: ರಾಜ್ಯದಲ್ಲಿ ಜನರು ಕೊರೊನಾದಿಂದ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಬಿಜೆಪಿ ಸರ್ಕಾರ ನಡೆಸುತ್ತಿರುವ ಕೊರೊನಾ ನಿರ್ವಹಣೆ ಸ್ವಪಕ್ಷೀಯ ಕಾರ್ಯಕರ್ತರಿಗೇ ತೃಪ್ತಿ ತಂದಿಲ್ಲ. ಈ ನಡುವೆ ಪಕ್ಷದ ಕಾರ್ಯಕರ್ತರೋರ್ವರು ಡಿ.ವಿ.ಸದಾನಂದ ಗೌಡರಿಗೆ ಕೇಳಿದ ಪ್ರಶ್ನೆ ಮತ್ತು ಅವರ ಉತ್ತರ ಸದ್ಯ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.
ಕೇರಳ, ಆಂಧ್ರದಲ್ಲಿ ಬಡವರಿಗೆ ಪ್ಯಾಕೇಜ್ ಘೋಷಣೆಯಾಗಿದೆ. ಆದರೆ ಕರ್ನಾಟಕದಲ್ಲಿ ಯಾಕೆ ಪ್ಯಾಕೇಜ್ ಘೋಷಣೆಯಾಗುತ್ತಿಲ್ಲ. ದಯವಿಟ್ಟು ಬಡವರಿಗೆ ಕರ್ನಾಟಕದಲ್ಲಿ ಪ್ಯಾಕೇಜ್ ಘೋಷಣೆ ಮಾಡಿ ಎಂದು ಬಿಜೆಪಿ ಕಾರ್ಯಕರ್ತರೋರ್ವರು ಸದಾನಂದ ಗೌಡರಿಗೆ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ನಾವು ಕೇಂದ್ರದಿಂದ ಎಲ್ಲಾ ರೀತಿಯಲ್ಲಿಯೂ ಪರಿಹಾರ ಕೊಟ್ಟಿದ್ದೇವೆ. ನೀವು ಈ ಬಗ್ಗೆ ನಿಮ್ಮ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಪ್ರಶ್ನೆ ಮಾಡಿ, ಅವರೊಂದಿಗೆ ಮಾತನಾಡಿ ಎಂದು ಸದಾನಂದ ಗೌಡರು ಹೇಳಿದ್ದಾರೆ.
ನಿಮ್ಮ ರಾಜ್ಯ ನಾಯಕರು ಏನು ಮಾಡುತ್ತಿದ್ದಾರೆ? ನೀವು ಮೊದಲು ಅವರನ್ನು ಸಂಪರ್ಕಿಸಿ ಮಾತನಾಡಿ, ಈ ಬಗ್ಗೆ ನಾನು ಕೂಡ ವಿಚಾರಣೆ ನಡೆಸುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ಉತ್ತರಿಸಿದ್ದಾರೆ ಎಂದು ವರದಿಯಾಗಿದೆ.