ನಾವು ಏನು ತಿನ್ನಬೇಕು ಎನ್ನುವುದನ್ನು ಪ್ರಶ್ನಿಸುವ ಹಕ್ಕು ಸಂಘಪರಿವಾರಕ್ಕೆ ಕೊಟ್ಟವರಾರು: ಧಮ್ಮಾನಂದ ಬಿ. ಪ್ರಶ್ನೆ - Mahanayaka

ನಾವು ಏನು ತಿನ್ನಬೇಕು ಎನ್ನುವುದನ್ನು ಪ್ರಶ್ನಿಸುವ ಹಕ್ಕು ಸಂಘಪರಿವಾರಕ್ಕೆ ಕೊಟ್ಟವರಾರು: ಧಮ್ಮಾನಂದ ಬಿ. ಪ್ರಶ್ನೆ

belthangady
16/08/2022

ಬೆಳ್ತಂಗಡಿ; ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಸಂವಿಧಾನದ ಹಕ್ಕುಗಳ ಸಂರಕ್ಷಣೆಗಾಗಿ ವಿಶೇಷ ಕಾರ್ಯಕ್ರಮವನ್ನು ಬೆಳ್ತಂಗಡಿಯಲ್ಲಿ ಸಮಾನಮನಸ್ಕರ ವೇದಿಕೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.


Provided by

“ನನ್ನ ಆಹಾರ ನನ್ನ ಹಕ್ಕು” ಎಂಬ ಘೋಷಣೆಯಡಿಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ , ಅಂಬೇಡ್ಕರ್ ವಾದಿ ಧಮ್ಮಾನಂದ ಬಿ ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ನಮ್ಮೆಲ್ಲರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಸ್ತುತ ನಾವು ಅತ್ಯಂತ ವಿಷಮ ಸ್ಥಿತಿಯಲ್ಲಿ ಬದುಕುವಂತಾಗಿರುವುದು ನಮ್ಮ ದೇಶದ ದುರಂತ. ಸಂವಿಧಾನದ ಪರಿಚ್ಛೇದ 21 ರಲ್ಲಿ ನಮ್ಮ ಆಹಾರದ ಹಕ್ಕುಗಳ ಬಗ್ಗೆ ಸ್ಪಷ್ಟಪಡಿಸಿದ್ದರೂ ಸಂಘಪರಿವಾರ ಜನರ ಆಹಾರದ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸುವ ಮೂಲಕ  ದೌರ್ಜನ್ಯ ನಡೆಸುತ್ತಿದೆ. ನಾವು ಏನು ತಿನ್ನಬೇಕು ಎನ್ನುವುದು ನಮ್ಮ ತೀರ್ಮಾನ. ಅದನ್ನು ಪ್ರಶ್ನಿಸುವ ಹಕ್ಕು ಸಂಘಪರಿವಾರಕ್ಕೆ ಕೊಟ್ಟವರಾರು ಎಂದು ಪ್ರಶ್ನಿಸಿದ ಅವರು ದೇಶದ ಸ್ವಾತಂತ್ರ್ಯವೆಂದರೆ ಜನರ ಮೂಲಭೂತ ಹಕ್ಕುಗಳು ಹಾಗಾಗಿ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ನಾವು ಸಂಘಟಿತ ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ ಎಂದರು.


Provided by

ಸಾಮಾಜಿಕ ಹೋರಾಟಗಾರ , ಸಿಪಿಐ(ಎಂ) ಮುಖಂಡ ಶೇಖರ್ ಲಾಯಿಲ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಈ ಸಂದರ್ಭದಲ್ಲಿ ನಮ್ಮ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ನಾವು ಧ್ವನಿ ಎತ್ತುತ್ತಿರುವುದು ದುರಂತ. ರಾಜಸ್ಥಾನದಲ್ಲಿ ದಲಿತ ಬಾಲಕ ನೀರಿನ ಪಾತ್ರೆ ಮುಟ್ಟಿದ ಎಂಬ ಕಾರಣಕ್ಕಾಗಿ ಕೊಲೆ ನಡೆದಿರುವಾಗ ಸ್ವಾತಂತ್ರ್ಯ ಅಮೃತಮಹೋತ್ಸವಕ್ಕೆ ಯಾವ ಅರ್ಥವಿದೆ ಎಂದು ಪ್ರಶ್ನಿಸಿದ ಅವರು ಗೋವಿನ ಹೆಸರಿನಲ್ಲಿ ಅನೈತಿಕ ಪೋಲಿಸ್ ಗಿರಿ ನಡೆಸುವ ಸಂಘಪರಿವಾರ , ಬಿಜೆಪಿ ಕಾರ್ಯಕರ್ತರೇ ಇಂದು ಅಕ್ರಮ ಗೋಸಾಗಟದಲ್ಲಿ ನೇರವಾಗಿ ಭಾಗಿಯಾಗುತ್ತಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶವು ಗೋಮಾಂಸ ರಪ್ತಿನಲ್ಲಿ ಜಗತ್ತಿನಲ್ಲಿ ನಂ 1 ಆಗಿದೆ ಎಂದು ಆರೋಪಿಸಿದರು.

ಖ್ಯಾತ ಯುವ ನ್ಯಾಯವಾದಿ ಅಬಿನ್ ಫ್ರಾನ್ಸಿಸ್ ಮಾತನಾಡುತ್ತಾ ನಮ್ಮ ಹಕ್ಕುಗಳ ಬಗ್ಗೆ ಮಾತನಾಡದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಹಕ್ಕುಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಬರಹಗಾರ ಶಫಿ ಬಂಗಾಡಿ , ಪ್ರಮುಖರಾದ ಖಾದರ್ ನಾವೂರು , ಮಂಜುನಾಥ್ ಲಾಯಿಲ , ರಮೀಝ್ ಬೆಳ್ತಂಗಡಿ , ಜಯರಾಂ ಮಯ್ಯ ಕೊಯ್ಯೂರು , ಹರೀಶ್ ಎಲ್ , ರಾಮಚಂದ್ರ ಧರ್ಮಸ್ಥಳ , ನೆಬಿಸಾ ಬೆಳ್ತಂಗಡಿ , ಹರೀಶ್ ಕುಮಾರ್ ಎಲ್ , ಸಂದೇಶ್ ಎಲ್ , ಕೃಷ್ಣ ಎಲ್ , ವಿನುಶು ರಮಣ ಪಟ್ರಮೆ , ಜೋಶಿಲ್ ಫರ್ನಾಂಡೀಸ್, ಮುಸ್ತಫಾ ಲಾಯಿಲ,ಉಮ್ಮರ್ ಲಾಯಿಲ, ಲಾರೆನ್ಸ್ ಕೈಕಂಬ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಗೋಮಾಂಸದ ಬಿರಿಯಾನಿ ಸೇವಿಸುವ ಮೂಲಕ ಸಂವಿಧಾನಿಕ ಹಕ್ಕುಗಳೊಂದಾದ ನನ್ನ ಆಹಾರ ನನ್ನ ಹಕ್ಕು ಎಂಬುದನ್ನು ಎತ್ತಿ ಹಿಡಿಯಲಾಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ