ನನಗೆ ವಯಸ್ಸಾಗಿದೆ, ನನ್ನ ಬೆಡ್ ಯುವಕರಿಗೆ ನೀಡಿ ಎಂದಿದ್ದ ದೊರೆಸ್ವಾಮಿ | ವೈದ್ಯರು ಏನಂದ್ರು ನೋಡಿ - Mahanayaka
10:29 PM Thursday 19 - September 2024

ನನಗೆ ವಯಸ್ಸಾಗಿದೆ, ನನ್ನ ಬೆಡ್ ಯುವಕರಿಗೆ ನೀಡಿ ಎಂದಿದ್ದ ದೊರೆಸ್ವಾಮಿ | ವೈದ್ಯರು ಏನಂದ್ರು ನೋಡಿ

doreswamy
26/05/2021

ಬೆಂಗಳೂರು: ನನಗೆ 104 ವರ್ಷ ವಯಸ್ಸಾಗಿದೆ, ನನ್ನ ಬೆಡ್ ಯಾರಿಗಾದರೂ ಯುವಕರಿಗೆ ಕೊಟ್ಟು ಬಿಡಿ ಎಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆ ಸ್ವಾಮಿ ವೈದ್ಯರ ಬಳಿ ಹೇಳಿದ್ದರಂತೆ.

ದೊರೆಸ್ವಾಮಿ ಅವರು ಇಂದು ನಿಧನರಾದ ಬಳಿಕ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಜಯದೇವ ಆಸ್ಪತ್ರೆಯ  ಹೃದ್ರೋಗ ಸಂಸ್ಥೆಯ ಡಾ.ಸಿ.ಎನ್.ಮಂಜುನಾಥ್ ಅವರು ದೊರೆಸ್ವಾಮಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನಡೆದ ಮತ್ತು ನಡೆಯುತ್ತಿದ್ದ ಘಟನೆಗಳನ್ನು  ಮೆಲುಕು ಹಾಕಿದ್ದಾರೆ.

ಮಾರ್ಚ್ 6ರಂದು ಕೊರೊನಾ ಸೋಂಕಿನಿಂದ ದೊರೆಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದರು.  ಮೇ 12ರಂದು ಅವರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.  ಆದರೆ14ರಂದು ಮತ್ತೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಸುಮಾರು 8-10 ವರ್ಷಗಳಿಂದ ದೊರೆಸ್ವಾಮಿ ಅವರಿಗೆ ಹೃದಯ ಸಂಬಂಧಿ ಸಮಸ್ಯೆಗಳು ಕೂಡ ಇದ್ದವು. ಇಂದು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


Provided by

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ದೇಶದ ಜ್ವಲಂಥ ಸಮಸ್ಯೆಗಳ ಬಗ್ಗೆಯೇ ದೊರೆಸ್ವಾಮಿ ಯೋಚಿಸುತ್ತಿದ್ದರು. ಆಸ್ಪತ್ರೆಗೆ ದಾಖಲಾಗಲು ಅವರಿಗೆ ಮನಸ್ಸಿರಲಿಲ್ಲ, ನನಗೆ 104 ವರ್ಷ ವಯಸ್ಸಾಗಿದೆ. ನನ್ನ ಬದಲು ಯುವಕರಿಗೆ ಬೆಡ್ ನೀಡಿ ಎಂದು  ಅವರು ಒತ್ತಾಯಿಸಿದ್ದರಂತೆ ಎಂದು ಮಂಜುನಾಥ್ ತಿಳಿಸಿದ್ದಾರೆ.

ನಾನು ಈ ಹಿಂದೆಯೂ ಅವರಿಗೆ ಸಾಕಷ್ಟು ಬಾರಿ ಚಿಕಿತ್ಸೆ ನೀಡಿದ್ದೇನೆ.  ಕಳೆದ 10 ವರ್ಷದಲ್ಲಿ 6-7 ಬಾರಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಬಹಳಷ್ಟು ಬಾರಿ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದುವಾಗ, ವಿಶ್ರಾಂತಿ ತೆಗೆದುಕೊಳ್ಳಿ ಎಂದು ನಾನು ಹೇಳುತ್ತಿದ್ದೆ. ಆದರೆ ಅವರು ಡಿಸ್ಚಾರ್ಜ್ ಆಗಿ 3 ಗಂಟೆಯಲ್ಲೇ ಪ್ರತಿಭಟನೆಗೆ ಕುಳಿತುಕೊಂಡಿರುತ್ತಿದ್ದರು ಎಂದ ವೈದ್ಯರು ದೊರೆಸ್ವಾಮಿ ಅವರು ನಮ್ಮೆಲ್ಲರಿಗೂ ಪ್ರೇರಣೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ