ನನ್ನ ಹೆಸರಲ್ಲಿ ನನ್ನ ಮಗ ಅಧಿಕಾರ ಚಲಾಯಿಸುವುದನ್ನು ಒಪ್ಪುವುದಿಲ್ಲ | ಸಿಎಂಗೆ ಸಚಿವ ಸಿ.ಪಿ.ಯೋಗೇಶ್ವರ್ ಟಾಂಗ್
ಬೆಂಗಳೂರು: ಸಚಿವನಾಗಿ ನನ್ನ ಹೆಸರಲ್ಲಿ ನನ್ನ ಮಗ ಅಧಿಕಾರ ಚಲಾಯಿಸುವುದನ್ನು ಒಪ್ಪುವುದಿಲ್ಲ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರಗೆ ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಹೆಸರಲ್ಲಿ ಬೇರೊಬ್ಬರು ಅಧಿಕಾರ ಚಲಾಯಿಸುವುದನ್ನು ಒಪ್ಪಲ್ಲ. ಇದರ ಸೂಕ್ಷ್ಮ ಏನೆಂಬುದು ನಿಮಗೆ ಅರ್ಥ ಆಗುತ್ತೆ. ನಾನು ದೆಹಲಿಗೆ ಹೋಗ್ತಾನೆ ಇರ್ತೇನೆ. ಮುಂದೆಯೂ ಹೋಗ್ತೇನೆ. ನನ್ನದೇ ಆದ ಸಮಸ್ಯೆಗಳಿವೆ. ಅದಕ್ಕೆ ಪರಿಹಾರ ಕಂಡುಕೊಳ್ಳಲು ನಾಯಕರನ್ನು ಭೇಟಿ ಮಾಡಲು ಹೋಗುತ್ತೇನೆ. ಅದು ಏನೆಂದು ಮುಂದಿನ ದಿನಗಳಲ್ಲಿ ಸಂದರ್ಭ ಬಂದಾಗ ಹೇಳುತ್ತೇನೆ ಎಂದು ಅವರು ಹೇಳಿದರು.
ನಾಯಕತ್ವ ಬದಲಾವಣೆ ಚರ್ಚೆ ಎಲ್ಲಿಂದ ಹುಟ್ಟಿತು ಗೊತ್ತಿಲ್ಲ. ಪಕ್ಷ ನನಗೆ ಎಂಎಲ್ ಸಿ, ಸಚಿವರನ್ನಾಗಿ ಮಾಡಿದೆ. ನನ್ನ ನೋವು ನಲಿವು ತೋಡಿಕೊಳ್ಳಲು ದೆಹಲಿಗೆ ಹೋಗಿದ್ದೆ. ಇದು ಮೂರು ಪಕ್ಷಗಳ ಸರ್ಕಾರ. ನಮ್ಮ ಪಕ್ಷಕ್ಕೆ ಬಂದವರ ಬಗ್ಗೆ ಮಾತನಾಡುತ್ತಿಲ್ಲ. ಬೇರೆಯವರು ನನ್ನ ಹೆಸರಲ್ಲಿ ಅಧಿಕಾರ ಚಲಾಯಿಸುವುದು ಸಮಾಧಾನ ತಂದಿಲ್ಲ. ಅದರ ವಿಚಾರ ಯಡಿಯೂರಪ್ಪ ಅವರಿಗೂ ಹೇಳಿದ್ದೇನೆ ಎಂದು ಅವರು ಹೇಳಿದರು.