#ನನ್ನ_ಜಾತಿ_ನನ್ನ_ಹೆಮ್ಮೆ | ತನ್ನ ಮನೆಗೆ ಜಾತಿಯ ಹೆಸರಿಟ್ಟ ದಲಿತ | ಮನುವಾದಕ್ಕೆ ತಿರುಗೇಟು - Mahanayaka
10:21 AM Thursday 12 - December 2024

#ನನ್ನ_ಜಾತಿ_ನನ್ನ_ಹೆಮ್ಮೆ | ತನ್ನ ಮನೆಗೆ ಜಾತಿಯ ಹೆಸರಿಟ್ಟ ದಲಿತ | ಮನುವಾದಕ್ಕೆ ತಿರುಗೇಟು

31/12/2020

ದಲಿತರು ಸಾರ್ವಜನಿಕ ಪ್ರದೇಶಗಳಲ್ಲಿ ತಮ್ಮ ಜಾತಿಯ ಹೆಸರನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎನ್ನುವ ಸಂದೇಶವನ್ನು  ದಲಿತ ವ್ಯಕ್ತಿಯೊಬ್ಬರು ಹೇಳಿದ್ದು, ಈ ಸಂಬಂಧ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ.

ಶರ್ವಿತ್ ಪಾಲ್ ಚಮ್ಮಾರ್ ಎಂಬವರು ತಮ್ಮ ಜಾತಿಯ ಹೆಸರನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದು, ತಮ್ಮ ಮನೆಗೆ “ಚಮ್ಮಾರ್ ಭವನ” ಎಂದೇ ಹೆಸರಿಡುವ ಮೂಲಕ ದಲಿತರಿಗೆ ಮಾದರಿಯಾಗಿದ್ದಾರೆ. ಅವರಿವರು ಅವಮಾನ ಮಾಡುತ್ತಾರೆ ಎಂದು ದಲಿತರು ಹೆದರಬೇಕಿಲ್ಲ. ಎಲ್ಲರೂ ತಮ್ಮ ಜಾತಿಯ ಹೆಸರನ್ನು ಹೆಮ್ಮೆಯಿಂದ ಹೇಳಿಕೊಂಡರೆ, ದಲಿತರು ಅವಮಾನವಾಗುತ್ತದೆ ಎಂಬ ಕಾರಣಕ್ಕೆ ಹೇಳಿಕೊಳ್ಳುವುದಿಲ್ಲ. ಆದರೆ, ಶರ್ವಿತ್ ಪಾಲ್ ಚಮ್ಮಾರ್ ಅವರು ವಿಭಿನ್ನವಾಗಿ ಯೋಚನೆ ಮಾಡಿದ್ದಾರೆ.

ಶರ್ವಿತ್ ಪಾಲ್ ಚಮ್ಮಾರ್ ಅವರು ಟ್ವಿಟ್ಟರ್ ನಲ್ಲಿ 2 ನಿಮಿಷ, 11 ಸೆಕೆಂಡ್ ನ ವಿಡಿಯೋ ಅಪ್ ಲೋಡ್ ಮಾಡಿದ್ದು, ಈ ವಿಡಿಯೋದಲ್ಲಿ, “ಸಿಖ್, ಮುಸ್ಲಿಮ್, ಬ್ರಾಹ್ಮಣರು ತಮ್ಮ ವಂಶದ ಹೆಸರನ್ನು ಅವರ ಮನೆಗಳಿಗೆ ಇಡುತ್ತಾರೆ. ನಾನು ಒಬ್ಬ ಚಮ್ಮಾರ್ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ” ಎಂದು ಹೇಳಿದ್ದಾರೆ.

ಮನುಸ್ಮೃತಿಯ ಜಾತಿ ವ್ಯವಸ್ಥೆಯಿಂದಾಗಿ ದಲಿತರು ಅನುಭವಿಸಿರುವ ಘನಘೋರ ಘಟನೆಗಳನ್ನು ವಿವರಿಸಿ ಮುಗಿಯಲು ಸಾಧ್ಯವಿಲ್ಲ. ದಲಿತರು ಇತರ ಜಾತಿಯವರಿಗೆ ತಲೆಬಾಗುವುದನ್ನು ಮೊದಲು ಬಿಡಬೇಕು. ಬಗ್ಗಿದವನಿಗೆ ಎರಡು ಒದೆ ಹೆಚ್ಚೇ ಇರುತ್ತದೆ. ಹಾಗಾಗಿ ದಲಿತರು ಇತರ ಜಾತಿಯವರಿಗೆ ಸಮಾನಾಗಿ ನಿಲ್ಲಬೇಕು. ಯಾರ ಗುಲಾಮಗಿರಿ ಮಾಡಬೇಕಾದ ಅಗತ್ಯವಿಲ್ಲ. ಯಾರಿಗೂ ಅನಗತ್ಯ ಗೌರವ ಕೊಡಬೇಕಾದ ಅಗತ್ಯವಿಲ್ಲ.  ನಿಮಗೆ ಗೌರವ ನೀಡಿದವರಿಗೆ ಮಾತ್ರವೇ ಗೌರವ ನೀಡಿ, ವಯಸ್ಸಿನಲ್ಲಿ ಹಿರಿಯರಿಗೆ, ದೊಡ್ಡ ವ್ಯಕ್ತಿತ್ವಗಳಿಗೆ ಮಾತ್ರವೇ ಗೌರವ ನೀಡಬೇಕೇ ಹೊರತು, ದೊಡ್ಡ ಜಾತಿಯವನು ಎನ್ನುವ ಕಾರಣಕ್ಕೆ ಯಾರಿಗೂ ಗೌರವ ಕೊಡಬೇಕಾದ ಅಗತ್ಯ ಇಲ್ಲ. ಚಮ್ಮಾರ್ , ನಾನೊಬ್ಬ ಚಮ್ಮಾರ್ ಎಂದು ಹೇಳಿಕೊಳ್ಳಲು ಹೇಗೆ ಹೆಮ್ಮೆ ಪಡುತ್ತಾನೋ ಹಾಗೆಯೇ ಪ್ರತಿಯೊಬ್ಬ ದಲಿತರು ಕೂಡ ತನ್ನ ಜಾತಿಯನ್ನು ಹೆಮ್ಮೆಯಿಂದ ಹೇಳಬೇಕಾದ ಅಗತ್ಯವಿದೆ ಎನ್ನುವ ಮಾತುಗಳು ಇದೀಗ ಶರ್ವಿತ್ ಪಾಲ್ ಚಾಮರ್ ಅವರ ಕಾರ್ಯದಿಂದಾಗಿ ಕೇಳಿ ಬಂದಿದೆ.

ಅಂದ ಹಾಗೆ, ಶರ್ಮೀತ್ ಅವರ್ ಮಗ ಕೂಡ ತಮ್ಮ ತಂದೆಯಂತೆಯೇ ತನ್ನ ಜಾತಿಯ ಬಗ್ಗೆ ಹೆಮ್ಮೆ ಹೊಂದಿದ್ದಾನಂತೆ. ಈತ ತನ್ನ ವೈಫೈಗೆ ಚಮ್ಮಾರ್ ಎಂದೇ ಹೆಸರು ನೀಡಿದ್ದಾನಂತೆ. ಶತಮಾನಗಳಿಂದ ಜಾರಿಯಲ್ಲಿರುವ ಹೊಲಸು ಜಾತಿ ಪದ್ಧತಿಯನ್ನು ಬದಲಾವಣೆ ಮಾಡಬೇಕಾದರೆ, ದಲಿತರು ಬದಲಾಗಬೇಕು, ಮಾನಸಿಕವಾಗಿ ಬಲಗೊಳ್ಳಬೇಕು. ಯಾವುದೇ ಮೇಲ್ಜಾತಿಯ ವ್ಯಕ್ತಿ ಬಂದು  ಸಮಾನತೆಯನ್ನು ನೀಡುತ್ತಾನೆ ಎಂದು ಕಾದು ಕುಳಿತುಕೊಳ್ಳುವುದರಲ್ಲಿ ಯಾವುದೇ ಫಲವಿಲ್ಲ.

 

https://twitter.com/PunYaab/status/1344142954244362240?s=20

https://twitter.com/PunYaab/status/1344142954244362240?s=20

ಇತ್ತೀಚಿನ ಸುದ್ದಿ