ತಾಯಿ ಕೊವಿಡ್ ಗೆ ಬಲಿ | “ನನ್ನವ್ವ ನನ್ನ ಅನಾಥವಾಗಿಸಿದಳು” ಎಂದು ಕಣ್ಣೀರು ಹಾಕಿದ ಶಾಸಕ ಪಿ.ರಾಜೀವ್
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡುಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಅವರ ತಾಯಿ ಇಂದು ಬೆಳಗ್ಗೆ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ.
75 ವರ್ಷ ವಯಸ್ಸಿನ ಪಾಂಡಪ್ಪ ಲಮಾಣಿ ಮೃತಪಟ್ಟವರಾಗಿದ್ದಾರೆ. ತೀವ್ರ ಉಸಿರಾಟದ ಹಿನ್ನೆಲೆಯಲ್ಲಿ ಕಳೆದೊಂದು ವಾರಗಳಿಂದ ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗಿನ ಜಾವ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ನನ್ನ ಪೂಜ್ಯ ತಾಯಿಯವರು ಕೊರೋನಾ ಸೋಂಕಿನಿಂದ ಇಂದು ಮೃತಪಟ್ಟು ನಮ್ಮೆಲ್ಲರನ್ನು ಬಿಟ್ಟು ಅಗಲಿರುತ್ತಾರೆ. ನಾನು ಸಹ ಅವರ ಪ್ರಾಥಮಿಕ ಸಂಪರ್ಕ ಹೊಂದಿರುವುದರಿಂದ ಯಾರು ನನ್ನನ್ನು ಭೇಟಿಯಾಗಲು ಬರದೆ ಸಂತಾಪ ಸೂಚಿಸಲು ಮನವಿ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ರಾಜೀವ್ ಅವರು ಟ್ವೀಟ ಮಾಡಿದ್ದಾರೆ.
ನಾನು, ನನ್ನ ಹೆಂಡತಿ, ಎರಡು ಮಕ್ಕಳು, ಇಬ್ಬರು ಆಪ್ತ ಸಹಾಯಕರು ಕರೊನಾದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ತಾಯಿಯವರು ಸೋಂಕಿಗೆ ಒಳಗಾಗಿದ್ದರಿಂದ ಅವರ ಆರೈಕೆಯಲ್ಲಿ ನಾನೇ ತೊಡಗಿದ್ದರಿಂದ ಮತ್ತು ನನ್ನಕ್ಕ ಹಾಗೂ ಅಕ್ಕನ ಮಗ ಚಿಕಿತ್ಸೆಯನ್ನು ಮನೆಯಲ್ಲಿಯೇ ಪಡೆಯುತ್ತಿರುವುದರಿಂದ ಯಾರಿಗೂ ತಿಳಿಸದೆ ಮಾರ್ಗಸೂಚಿಯನ್ವಯ ತಾಯಿಯ ಅಂತ್ಯಸಂಸ್ಕಾರವನ್ನು ನೆರವೇರಿಸಿರುತ್ತೇನೆ. ನನ್ನ ಮನೆಯ ವಾತಾವರಣ ಸದ್ಯಕ್ಕೆ ಹೆಚ್ಚು ಸೋಂಕುಪೀಡಿತವಾಗಿರುವುದರಿಂದ ಯಾರೂ ಸಹ ಸಾಂತ್ವನ ಹೇಳುವುದಕ್ಕಾಗಿ ಆಗಮಿಸ ಬಾರದೆಂದು ವಿನಂತಿಸುತ್ತೇನೆ. ಆದಷ್ಟು ಬೇಗ ನನ್ನ ನನ್ನ ಸಾಮಾಜಿಕ ಕರ್ತವ್ಯಕ್ಕೆ ಹಾಜರಾಗುತ್ತೇನೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಜನ್ಮನೀಡಿ, ಎದೆ ಹಾಲುಣಿಸಿ, ಕೈತುತ್ತು ನೀಡಿ, ಸೆರಗಿನಿಂದ ಮೈ ಒರೆಸಿ, ಅಕ್ಕರೆಯಿಂದ ಬದುಕಿನ ಮೌಲ್ಯಗಳನ್ನು ತಿಳಿಸಿ ಬೆಳೆಸಿದ ನನ್ನವ್ವ ಕರೊನಾಗೆ ಬಲಿಯಾಗಿ ಇಂದು ನನ್ನನ್ನು ಅನಾಥವಾಗಿಸಿದಳು. ಆಕೆಯ ಅಗಲಿಕೆ ನನ್ನ ಹೃದಯವನ್ನು ಅಲುಗಾಡಿಸಿದೆ ಎಂದು ರಾಜೀವ್ ನೋವು ವ್ಯಕ್ತಪಡಿಸಿದ್ದಾರೆ.