ನಾನು ಭಾರತಕ್ಕೆ ಕಾಲಿಟ್ಟರೆ ಮಾತ್ರ ದೇಶ ಕೊರೊನಾದಿಂದ ವಿಮೋಚನೆಯಾಗುತ್ತದೆ | ಸ್ವಾಮಿ ನಿತ್ಯಾನಂದ
ನವದೆಹಲಿ: ತಾನು ಭಾರತಕ್ಕೆ ಮರಳಿದರೆ ಮಾತ್ರ ಕೊವಿಡ್ 19 ಕೊನೆಯಾಗುತ್ತದೆ ಎಂದು ದೇವಮಾನವ, ಲೈಂಗಿಕ ಕಿರುಕುಳ ಆರೋಪಿ ಸ್ವಾಮಿ ನಿತ್ಯಾನಂದ ಹೇಳಿಕೆ ನೀಡಿರುವ ವಿಡಿಯೋ ಬಿಡುಗಡೆಯಾಗಿದೆ.
ಎರಡು ದಿನಗಳ ಹಿಂದೆ ಬಿಡುಗಡೆಯಾಗಿರುವ ವಿಡಿಯೋದಲ್ಲಿ, ಭಕ್ತರೊಬ್ಬರು, ಭಾರತ ಯಾವಾಗ ಕೊರೊನಾದಿಂದ ಮುಕ್ತವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ನಿತ್ಯಾನಂದನ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
“ಅಮ್ಮನ್ ದೇವಿಯ ಆತ್ಮವು ನನ್ನ ಪವಿತ್ರವಾದ ದೇಹವನ್ನು ಪ್ರವೇಶಿಸಿದೆ. ನಾನು ಭಾರತಕ್ಕೆ ಕಾಲಿಟ್ಟಾಗ ಭಾರತವು ಕೊವಿಡ್ 19ನಿಂದ ವಿಮೋಚನೆ ಹೊಂದುತ್ತದೆ” ಎಂದು ನಿತ್ಯಾನಂದ ಉತ್ತರಿಸಿದ್ದಾನೆ.
ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ನಿತ್ಯಾನಂದ 2019ರಲ್ಲಿ ದೇಶವನ್ನು ತೊರೆದಿದ್ದಾನೆ. ಈಕ್ವೆಡರ್ ದ್ವೀಪವನ್ನು ಖರೀದಿಸಿ ಕೈಲಾಸ ಎಂಬ ದೇಶವನ್ನು ಸ್ಥಾಪಿಸಿರುವುದಾಗಿ ಆ ಬಳಿಕ ನಿತ್ಯಾನಂದ ತನ್ನ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದ.
ಕೊರೊನಾ ಸಂದರ್ಭದಲ್ಲಿ ತನ್ನ ದೇಶಕ್ಕೆ ಭಾರತೀಯರ ಪ್ರವೇಶವನ್ನು ನಿಷೇಧಿಸಿರುವುದಾಗಿಯೂ ಆತ ಹೇಳಿಕೊಂಡಿದ್ದ. ಈತನ ಪತ್ತೆ ಈವರೆಗೆ ಸಾಧ್ಯವಾಗಿಲ್ಲ. ಆತ ಹೇಳಿರುವ ಕೈಲಾಸ ನಿಜವಾಗಿ ಇದೆಯೇ , ಇಲ್ಲವೇ ಎನ್ನುವುದೇ ಇನ್ನೂ ಸ್ಪಷ್ಟವಾಗಿಲ್ಲ.