ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಮಂಗಳೂರು ವಿವಿಯ ವಿದ್ಯಾರ್ಥಿ: 20 ಸಾವಿರ ಫೆಲೋಶಿಪ್’ಗೆ ಆಯ್ಕೆ
ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಅಂತಿಮ ಬಿ.ಎಸ್ಸಿ (ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ) ವಿದ್ಯಾರ್ಥಿ ಚೇತನ್ ಎಂ. ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಸ್ಸಾಂನ ದಿಬ್ರುಗಢ್ನ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ICMR RMRCNE) ನಲ್ಲಿ ಎಂ.ಎಸ್ಸಿಗೆ ಮಾಸಿಕ ರೂ. 20,000 ಫೆಲೋಶಿಪ್ ನೊಂದಿಗೆ ಆಯ್ಕೆಯಾಗಿದ್ದಾರೆ.
ಈ ಪರೀಕ್ಷೆಯ ಮೂಲಕ ಆಯ್ಕೆಯಾದ ದೇಶದ 34 ವಿದ್ಯಾರ್ಥಿಗಳಲ್ಲಿ ಚೇತನ್ ಒಬ್ಬರು. ಚೇತನ್ ಎಂ ಮೂಲತಃ ಚಾಮರಾಜನಗರ ಜಿಲ್ಲೆಯ ಬಸವಟ್ಟಿಯವರು. ಇವರು ರೈತ ಮಹೇಶ ಎಂ. ಮತ್ತು ಗೃಹಿಣಿ ಮಮತಾ ದಂಪತಿಯ ಪುತ್ರ. ಇವರ ಹಿರಿಯ ಸಹೋದರ ಭರತ್ ಕುಮಾರ್ ಎಂ ಮಂಗಳೂರಿನ ವಿವಿ ಕಾಲೇಜಿನಲ್ಲೇ ಎಂಎಸ್ಸಿ (ರಸಾಯನಶಾಸ್ತ್ರ) ಓದುತ್ತಿದ್ದಾರೆ.
ಚೇತನ್ 5ನೇ ತರಗತಿಯಲ್ಲೇ ಪ್ರವೇಶ ಪರೀಕ್ಷೆ ಬರೆದು ಚಾಮರಾಜನಗರದ ಆದರ್ಶ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದರು. ಅವರು ರಾಷ್ಟ ಮಟ್ಟದ NMMS ಪರೀಕ್ಷೆ (ನ್ಯಾಷನಲ್ ಮೀನ್ಸ್-ಕಮ್-ಮೆರಿಟ್ ಸ್ಕಾಲರ್ಶಿಪ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು ಮತ್ತು 8ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವರ್ಷಕ್ಕೆ ರೂ. 6000 ವಿದ್ಯಾರ್ಥಿವೇತನ ಪಡೆಯುತ್ತಿದ್ದರು.
ಮೈಸೂರಿನ ಮಹಾರಾಜ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿರುವ ಇವರು, ಇದೇ 14ನೇ ಆಗಸ್ಟ್ ರಂದು ಪಾಂಡಿಚೇರಿಯಲ್ಲಿ VCRC (ವೆಕ್ಟರ್ ಕಂಟ್ರೋಲ್ ರಿಸರ್ಚ್ ಸೆಂಟರ್) ನಡೆಸಿದ ರಾಷ್ಟ್ರೀಯ ಮಟ್ಟದ ಸಿಇಟಿಯನ್ನೂ ಬರೆದಿದ್ದಾರೆ. ಪ್ರೋತ್ಸಾಹಿಸಿದ ಪ್ರಾಂಶುಪಾಲೆ ಡಾ.ಅನಸೂಯಾ ರೈ, ತಮ್ಮ ಎಲ್ಲಾ ಪ್ರಾಧ್ಯಾಪಕರು, ವಿಶೇಷವಾಗಿ ತಮ್ಮ ಮಾರ್ಗದರ್ಶಕರಾದ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದರಾಜು ಎಂ.ಎನ್ ಮತ್ತು ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ನಾಗರತ್ನ ಅವರಿಗೆ ಚೇತನ್ ಧನ್ಯವಾದ ಸಲ್ಲಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಕಿಶೋರ್ ಕುಮಾರ್ ಸಿ.ಕೆ. ಅವರೂ ಚೇತನ್ ಎಂ ಅವರನ್ನು ಅಭಿನಂದಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka