10 ಸಾವಿರ ಕೊಡ್ಬೇಕಂತೆ, ನಾವೇನು ನೋಟು ಪ್ರಿಂಟ್ ಮಾಡ್ತೀವಾ? |ನಾಲಿಗೆ ಹರಿಯಬಿಟ್ಟ ಸಚಿವ ಈಶ್ವರಪ್ಪ
ಶಿವಮೊಗ್ಗ: ರಾಜ್ಯದಲ್ಲಿ ಸರ್ಕಾರ ಲಾಕ್ ಡೌನ್ ಘೋಷಿಸಿದ್ದರಿಂದಾಗಿ ಜನರು ಉದ್ಯೋಗವಿಲ್ಲದೇ ಮನೆಯಲ್ಲಿ ಕೂರುವಂತಾಗಿದೆ. ಆದಾಯ ಇಲ್ಲದೇ ಸಾಂಕ್ರಾಮಿಕ ರೋಗ ಕೊವಿಡ್ 19ನ ಸಂದರ್ಭದಲ್ಲಿ ಕೈಯಲ್ಲಿ ಹಣವಿಲ್ಲದೇ ಜನರು ತತ್ತರಿಸಿದ್ದಾರೆ. ಇತ್ತ ಸರ್ಕಾರ ಅಕ್ಕಿ ಕೊಡ್ತೀವಿ ಮನೆಯಲ್ಲಿ ಇರಿ, ಹೊರಗೆ ಬಂದ್ರೆ, ವಾಹನ ಸೀಝ್ ಮಾಡ್ತೀವಿ ಎಂದು ಹೇಳುತ್ತಿದೆ. ಇನ್ನೊಂದೆಡೆ ನಾನಾ ಸಂಕಷ್ಟಗಳಿಗಾಗಿ ಮನೆಯಿಂದ ಹೊರ ಬಂದವರಿಗೆ ಅನಗತ್ಯ ಓಡಾಟ ಎಂದು ವಿಚಾರಣೆ ಕೂಡ ಮಾಡದೇ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಈ ನಡುವೆ ಸಚಿವ ಈಶ್ವರಪ್ಪ ನಾಲಿಗೆ ಹರಿಯ ಬಿಟ್ಟಿದ್ದು, ಸರ್ಕಾರದ ಯೋಗ್ಯತೆಯನ್ನು ಬಯಲು ಮಾಡಿದ್ದಾರೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿರುವ ಈಶ್ವರಪ್ಪ, 14 ದಿನಗಳ ಕಾಲ ಸರ್ಕಾರದ ಬಗ್ಗೆ ಟೀಕೆ ಮಾಡದೇ ಕುಳಿತುಕೊಳ್ಳುವಂತೆ ಹೇಳಿದ್ದು, ನಿಮ್ಮ ಬಾಯಿಗೆ ಲಾಕ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಸಂಕಷ್ಟದಲ್ಲಿರು ರಾಜ್ಯದ ಜನತೆಗೆ 10 ಸಾವಿರ ರೂಪಾಯಿಗಳನ್ನು ಲಾಕ್ ಡೌನ್ ಅವಧಿಯಲ್ಲಿ ಪರಿಹಾರವಾಗಿ ನೀಡಬೇಕು ಎಂದು ಒತ್ತಾಯಿಸಿರುವುದಕ್ಕೆ ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ.
ಜನರಿಗೆ 10 ಸಾವಿರ ಕೊಡಿ ಅಂತೆ. ನಾವೇನು ನೋಟು ಪ್ರಿಂಟ್ ಮಾಡ್ತೀವಾ? ಎಂದು ಈಶ್ವರಪ್ಪ ನಾಲಿಗೆ ಹರಿಯಬಿಟ್ಟಿದ್ದಾರೆ. ಪ್ರತಿಯೊಂದಕ್ಕೂ ಟೀಕೆ ಮಾಡುತ್ತಾ ಕುಳಿತಿದ್ದೀರಿ, ಒಳ್ಳೆಯ ಕೆಲಸ ಒಂದಕ್ಕಾದರೂ ಅಭಿನಂದನೆ ಸಲ್ಲಿಸಿದ್ದೀರಾ? ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
14 ದಿನ ಸುಮ್ಮನೆ ಇರಿ, ಸಾಧ್ಯವಾದರೆ ಒಳ್ಳೆಯ ಸಲಹೆ ಕೊಡಿ ರೋಗಿಗಳ ಅನುಕೂಲಕ್ಕೆ ಸಲಹೆ ಕೊಟ್ಟರೆ ನಾವು ಮಾಡಲು ತಯಾರಿದ್ದೇವೆ. ನಿಮ್ಮ ಬಾಯಿಗಳಿಗೆ ಬೀಗ ಹಾಕಿಕೊಂಡರೆ ಲಾಕ್ ಡೌನ್ ಯಶಸ್ವಿಯಾಗುತ್ತದೆ ಎಂದು ಅವರು ಹೇಳಿದರು.