ಬೆಂಗಳೂರಿನಲ್ಲಿ ಅಮೆರಿಕಾ ವೀಸಾ ಕಚೇರಿ ತೆರೆಯುವ ಅಗತ್ಯವಿದೆ : ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಬೆಂಗಳೂರಿನಲ್ಲಿ ಅಮೆರಿಕಾ ವೀಸಾ ಕಚೇರಿ ತೆರೆಯುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ತಮ್ಮನ್ನು ಭೇಟಿಯಾದ ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎಲಿಜೆಬೆತ್ ಜೋನ್ಸ್ ಹಾಗೂ ಚೆನ್ನೈನಲ್ಲಿರುವ ಕಾನ್ಸುಲ್ ಜನರಲ್ ಜೂಡಿತ್ ರೇವಿನ್ ಅವರಿಗೆ ತಿಳಿಸಿದರು.
ಪ್ರಸ್ತುತ ವೀಸಾ ಕಚೇರಿ ಚೆನ್ನೈನಲ್ಲಿರುವುದರಿಂದ ಬೆಂಗಳೂರಿನಿಂದ ಅಮೇರಿಕಕ್ಕೆ ಪ್ರಯಾಣಿಸುವವರಿಗೆ ತೊಂದರೆಯಾಗುತ್ತಿದೆ. ಪ್ರತಿನಿತ್ಯ ವಿದೇಶಿಗರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಜನ ಅಮೇರಿಕಕ್ಕೆ ಪ್ರಯಾಣ ಬೆಳೆಸುವುದರಿಂದ , ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬೆಂಗಳೂರಿನಲ್ಲಿ ವೀಸಾ ಕಚೇರಿಯನ್ನು ತೆರೆಯುವಂತೆ ಆಗ್ರಹಿಸಿದರು.
ಬೆಂಗಳೂರಿನಲ್ಲಿರುವ ಅಮೇರಿಕದ ಸಂಸ್ಥೆಗಳಿಗೆ ಎಲ್ಲ ಅಗತ್ಯ ಸಹಕಾರವನ್ನು ರಾಜ್ಯ ಸರ್ಕಾರ ಒದಗಿಸುತ್ತಿದ್ದು, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ದಿಮೆಗಳನ್ನು ಸ್ಥಾಪಿಸಲು ಅತ್ಯುತ್ತಮ ವಾತಾವರಣವಿದೆ. ಹಾಗಾಗಿ, ವಿದೇಶಿ ಬಂಡವಾಳ ಹೂಡಿಕೆ ರಾಜ್ಯದಲ್ಲಿ ಹೆಚ್ಚಾಗಿದೆ. ಬೆಂಗಳೂರು ಭವಿಷ್ಯದ ನಗರ. ಆದ್ದರಿಂದ ಬೆಂಗಳೂರಿನಲ್ಲಿ ವೀಸಾ ಕಚೇರಿಯ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳು ಮನವರಿಕೆ ಮಾಡಿಕೊಟ್ಟರು.
ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ, ಇನ್ವೆಸ್ಟ್ ಕರ್ನಾಟಕ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಮಟ್ಟದ ಸಮಾವೇಶ ಹಾಗೂ ವಿಚಾರಸಂಕಿರಣಗಳು ನಡೆಯುತ್ತಲೇ ಇರುತ್ತವೆ. ಅಂತರರಾಷ್ಟ್ರೀಯ ಗಣ್ಯರು ಇವುಗಳಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸುತ್ತಾರೆ. ಬೆಂಗಳೂರು ಸ್ಟಾರ್ಟ್ ಅಪ್ ಕ್ಯಾಪಿಟಲ್ ಆಗಿದ್ದು, ದೇಶದಲ್ಲಿಯೇ ಅತಿ ಹೆಚ್ಚಿನ ಯೂನಿಕಾರ್ನ್ ಗಳಿಗೆ ತವರು. ಇಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿವೆ. ಏರೋಸ್ಪೇಸ್ ಹಾಗೂ ರಕ್ಷಣಾ ವಲಯದಲ್ಲಿಯೂ ಕರ್ನಾಟಕ ಮುಂಚೂಣಿಯಲ್ಲಿದ್ದು, ವಿಮಾನದ ಬಿಡಿಭಾಗಗಳ ಉತ್ಪಾದನೆಗೂ ಗುರಿಯನ್ನು ಹೊಂದಿದೆ ಎಂದರು.
ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರಿ ಎಲಿಜೆಬೆತ್ ಜೋನ್ಸ್ ಮಾತನಾಡಿ, ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿಗೆ ಇದು ತಮ್ಮ ಮೊದಲ ಭೇಟಿಯಾಗಿದ್ದು, ಅಮೇರಿಕ- ಭಾರತದ ವಾಣಿಜ್ಯ ಸಹಭಾಗಿತ್ವವನ್ನು ಮುನ್ನಡೆಸುವಲ್ಲಿ ಕರ್ನಾಟಕ ಮಹತ್ವದ ಪಾತ್ರವಹಿಸುತ್ತದೆ ಎಂದರು. ಇಲ್ಲಿ 650 ಕ್ಕೂ ಹೆಚ್ಚು ಅಮೇರಿಕನ್ ಕಂಪನಿಗಳಿವೆ, ಇವುಗಳಿಂದ ಅಮೇರಿಕ ಮತ್ತು ಭಾರತದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುತ್ತಿವೆ. ಭಾರತ ಮತ್ತು ಅಮೇರಿಕಾದ ಆರ್ಥಿಕತೆಗಳು ಹಲವಾರು ರೀತಿಯಲ್ಲಿ ಬೆಸೆದುಕೊಂಡಿದೆ. ಅಮೇರಿಕ ಮತ್ತು ಕರ್ನಾಟಕದ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಉತ್ಸುಕರಾಗಿರುವುದಾಗಿ ತಿಳಿಸಿದ ಅವರು, ಆವಿಷ್ಕಾರ ಕ್ರಮಾಂಕದಲ್ಲಿ ಮತ್ತೊಮ್ಮೆ ಮೊದಲ ಸ್ಥಾನ ಪಡೆದಿರುವುದಕ್ಕೆ ಮುಖ್ಯಮಂತ್ರಿಗಳನ್ನು ಅಭಿನಂದಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw