ಶೀತ-ನೆಗಡಿಯಿಂದ 3 ಮಕ್ಕಳು ಸಾವು, 14 ಮಂದಿ ಗಂಭೀರ | ಬಂದೇ ಬಿಟ್ಟಿತೇ 3ನೇ ಅಲೆ?
ಭೋಪಾಲ್: ಶೀತ-ನೆಗಡಿಯಿಂದ ಬಳಲುತ್ತಿದ್ದ ಮೂವರು ಮಕ್ಕಳು ಮೃತಪಟ್ಟಿದ್ದು, ಇನ್ನೂ ಹಲವು ಮಕ್ಕಳ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ನಡೆದಿದ್ದು, ಜನರನ್ನು ಆತಂಕಕ್ಕೆ ದೂಡಿದೆ.
ಕೊವಿಡ್ 19 ಮೂರನೇ ಅಲೆಗೆ ಮಕ್ಕಳೇ ಗುರಿಯಾಗಿದ್ದಾರೆ ಎನ್ನುವ ತಜ್ಞರ ಹೇಳಿಕೆಯ ಬೆನ್ನಲ್ಲೇ ಇಂತಹದ್ದೊಂದು ಘಟನೆ ನಡೆದಿರುವುದು ಇದೀಗ ಜನರ ಆತಂಕಕ್ಕೆ ಕಾರಣವಾಗಿದೆ. ಮೂವರು ಮಕ್ಕಳ ಸಾವು ಜಿಲ್ಲೆಯ ಅಧಿಕಾರಿಗಳಿಗೇ ಇದೀಗ ಆಘಾತವನ್ನು ನೀಡಿದೆ.
ಘಟನೆಗೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಜಿಲ್ಲೆಯ ಪೂರ್ಣೋತ್ತಂಪೂರ್ ಪಂಚಾಯತ್ನ ನ ಚಂದಮರಿಗ ಭೇಟಿ ನೀಡಿ ಅಲ್ಲಿನ ಜನರಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಈ ವೇಳೆ ಎಲ್ಲ ವರದಿಗಳು ನೆಗೆಟಿವ್ ಬಂದಿದೆ ಎಂದು ಹೇಳಲಾಗಿದೆ.
ಇನ್ನೂ ಶೀತದಿಂದ 14 ಮಂದಿ ಮಕ್ಕಳು ಬಳಲುತ್ತಿದ್ದು, ಇವರ ಮಾದರಿಗಳನ್ನು ವೈದ್ಯರು ಸಂಗ್ರಹಿಸುತ್ತಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. ಇನ್ನೂ ಘಟನೆಯ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ನೀಡಿದ ಹೇಳಿಕೆಯ ಪ್ರಕಾರ ಇಬ್ಬರು ಮಕ್ಕಳು ವೈರಸ್ ನಿಂದ ಮೃತಪಟ್ಟಿದ್ದಾರೆ. ಒಂದು ಮಗು ಅಪೌಷ್ಠಿಕತೆಯಿಂದ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಈ ಘಟನೆ ಏನೇ ಇರಲಿ, ಕೊರೊನಾ ಮೊದಲ ಹಾಗೂ ಎರಡನೇ ಅಲೆ ಸೃಷ್ಟಿಸಿದ ಸಾವು ನೋವುಗಳನ್ನು ಕಣ್ಣಾರೆ ಕಂಡ ಬಳಿಕವೂ ಜನರು ಮೂರನೇ ಅಲೆಯ ಬಗ್ಗೆ ಇನ್ನಷ್ಟು ಎಚ್ಚರ ವಹಿಸಬೇಕಿದೆ. ವಿಶೇಷವಾಗಿ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇರಿಸಬೇಕಿದೆ. ಪುಟ್ಟ ಮಕ್ಕಳ ಸಾವನ್ನು ದೇಶ ನೋಡುವಂತಾಗದಿರಲಿ ಎನ್ನುವ ಆತಂಕದ ಮಾತುಗಳು ಸದ್ಯ ಕೇಳಿ ಬಂದಿದೆ.