ನೆಹರೂ ಹೇಡಿ ನಾಯಕತ್ವದಿಂದ ಭಾರತ ಹಿಂದೂ ರಾಷ್ಟ್ರ ಘೋಷಣೆಯಾಗಲಿಲ್ಲ: ಬಿಜೆಪಿ ಶಾಸಕ
ಬಲ್ಲಿಯಾ: ಜವಹರಲಾಲ್ ನೆಹರೂ ಅವರ ಹೇಡಿ ನಾಯಕತ್ವದಿಂದಾಗಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡಲು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಸಾಧ್ಯವಾಗಿರಲಿಲ್ಲ ಎಂದು ಬಲ್ಲಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಆರೋಪಿಸಿದ್ದಾರೆ.
ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿ ನಾಯಕರು ಹಿಂದುತ್ವ ಅಜೆಂಡಾವನ್ನು ಜಾರಿಗೊಳಿಸಲು ಮುಂದಾಗಿದ್ದು, ಕಳೆದ ಹಲವು ದಿನಗಳಿಂದ ಹಿಂದುತ್ವಕ್ಕೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಉತ್ತರಪ್ರದೇಶ ಶಾಸಕರು ನೀಡುತ್ತಿದ್ದಾರೆ.
ಕಾಂಗ್ರೆಸ್ ನ ಕೊಳಕು ಆಲೋಚನೆಯಿಂದಾಗಿ ಭಾರತ ಇಬ್ಬಾಗವಾಯಿತು ಎಂದು ಹೇಳಿರುವ ಸುರೇಂದ್ರ ಸಿಂಗ್, ಜವಹರಲಾಲ್ ನೆಹರೂ ಪ್ರಧಾನಿಯಾಗಿರದಿದ್ದಿದ್ದರೆ ಭಾರತವನ್ನು ಹಿಂದೂ ರಾಷ್ಟ್ರ ಎಂದು 70 ವರ್ಷಗಳ ಹಿಂದೆಯೇ ಘೋಷಣೆ ಮಾಡುತ್ತಿದ್ದರು ಎಂದು ಸುರೇಂದ್ರ ಸಿಂಗ್ ಹೇಳಿದ್ದಾರೆ.
ಇನ್ನೂ ಬ್ರಾಹ್ಮಣರ ಪರ ಬ್ಯಾಟಿಂಗ್ ಮಾಡಿದ ಅವರು, ಕಾಶ್ಮೀರದಿಂದ ಬ್ರಾಹ್ಮಣರನ್ನು ಕಳುಹಿಸಿದ್ದಾಗ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಮೌನ ವಹಿಸಿದ್ದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿದೇಶಿ ಸಂಸ್ಕೃತಿಗೆ ಸೇರಿದವರು, ಅವರು ಮುಸ್ಲಿಂ ಪರವಾಗಿ ರಾಜಕೀಯ ಮಾಡುತ್ತಾರೆ.
ಪ್ರತಿಬಾರಿ ಚುನಾವಣೆಯ ಸಂದರ್ಭದಲ್ಲಿ ಕೂಡ ಹಿಂದುತ್ವ ಹಾಗೂ ಬ್ರಾಹ್ಮಣ್ಯ ಎಂಬ ವಿಚಾರ ಚರ್ಚೆಗೊಳಲಾಗುತ್ತಿದೆ. ಬಿಜೆಪಿಗರು ಹಿಂದುತ್ವ ಎಂದು ಹೇಳಿದರೆ, ಉಳಿದ ಪಕ್ಷಗಳು ಇದು ಬ್ರಾಹ್ಮಣ್ಯದ ಹೇರಿಕೆಯ ಭಾಗ ಎಂದೇ ಕರೆದುಕೊಂಡು ಬಂದಿವೆ. ದೇಶದ ರಾಜಕೀಯ ವ್ಯವಸ್ಥೆಯ ಹಿಂದೆ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ, ಪಂಚಮ ಎನ್ನುವ ಮನುಸ್ಮೃತಿಯ ಜಾತಿ ವ್ಯವಸ್ಥೆಯನ್ನು ಅಳವಡಿಸುವ ತಂತ್ರಗಾರಿಗೆ ನಡೆಯುತ್ತಲೇ ಬರುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ.
ಹಿಂದುತ್ವದ ಅಜೆಂಡಾವನ್ನು ಕಳೆದ ಬಾರಿಯೂ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಅಳವಡಿಸಿತ್ತು. ಆದರೆ ಚುನಾವಣೆಯಲ್ಲಿ ಗೆದ್ದ ಬಳಿಕ, ಹಿಂದುಳಿದ ವರ್ಗ, ಎಸ್ಸಿ, ಎಸ್ಟಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕೇವಲ ಒಂದು ಜಾತಿಯ ಅಭಿವೃದ್ಧಿಗೆ ಮಾತ್ರವೇ ಮುಂದಾಗಿತ್ತು. ಹಿಂದುಳಿದ ವರ್ಗಗಳು, ಎಸ್ಸಿ, ಎಸ್ಟಿ ಸೇರಿದಂತೆ ಎಲ್ಲ ಇತರ ಎಲ್ಲ ಜಾತಿಯ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಯೋಗಿ ಆದಿತ್ಯನಾಥ್ ಸರ್ಕಾರ ಆರೋಪಿಗಳನ್ನು ರಕ್ಷಿಸಲು ಯತ್ನಿಸಿದ ನಿದರ್ಶನ ಬಹಳಷ್ಟಿವೆ. ಊನಾ ಪ್ರಕರಣವನ್ನು ಗಮನಿಸಿದರೆ, ಜನರ ಎದೆ ಝಲ್ ಎನಿಸುತ್ತದೆ. ಹಿಂದುತ್ವ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಹೇರಿದ್ದು ಮಾತ್ರ ಬ್ರಾಹ್ಮಣ್ಯವಾಗಿದೆ. ಕೊರೊನಾ ಸಂದರ್ಭದಲ್ಲಿ ಇಲ್ಲಿನ ಹಿಂದೂಗಳ ಕೈ ಹಿಡಿಯದ ಬಿಜೆಪಿ ನಾಯಕರು , ತಾವು ಹೈಫೈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಜನ ಸಾಮಾನ್ಯರಿಗೆ ಗೋಮೂತ್ರ ಕುಡಿಯಿರಿ, ಸೆಗಣಿ(ದನದ ಮಲ) ಮೈಮೇಲೆ ಹಚ್ಚಿಕೊಳ್ಳಿ, ಅರಳೀಮರದಡಿಯಲ್ಲಿ ಮಲಗಿ ಎಂಬೆಲ್ಲ, ಸಲಹೆ ನೀಡಿದ್ದರು.
ಯೋಗಿ ಆದಿತ್ಯನಾಥ್ ಆಡಳಿತ ಅವಧಿಯಲ್ಲಿ ಹೇರಿದ ಬ್ರಾಹ್ಮಣ್ಯವು ಇತರ ಸಮುದಾಯಗಳ ಆಕ್ರೋಶಕ್ಕೆ ಗುರಿಯಾಗಿದೆ. ಹೀಗಾಗಿ ಮತ್ತೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಹಿಂದುತ್ವದ ಅಜೆಂಡಾವನ್ನು ಹೇರಲು ಮುಂದಾಗಿದೆ ಎನ್ನುವ ರಾಜಕೀಯ ಚರ್ಚೆಗಳು ಆರಂಭವಾಗಿದೆ.