ನೆರೆ ಮನೆಯ ಮಹಿಳೆಯ ವೈಯಕ್ತಿಕ ವಿಚಾರದಲ್ಲಿ ಹಸ್ತಕ್ಷೇಪ | ವ್ಯಕ್ತಿಯ ಬರ್ಬರ ಹತ್ಯೆ
ಬ್ರಹ್ಮಾವರ: ಪಕ್ಕದ ಮನೆಗೆ ಬರುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿ, ವ್ಯಕ್ತಿಯೋರ್ವ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಗುಡ್ಡೆಯಂಗಡಿ ಎಂಬಲ್ಲಿ ನಡೆದಿದೆ.
ಹೊಸೂರು ನಿವಾಸಿ 43 ವರ್ಷದ ನವೀನ್ ನಾಯ್ಕ್ ಹತ್ಯೆಗೀಡಾದ ವ್ಯಕ್ತಿ. ಗೌತಮ್ ಹಾಗೂ ಸಹಚರರು ಹತ್ಯೆ ಆರೋಪಿಗಳಾಗಿದ್ದಾರೆ. ಗೌತಮ್ ನನ್ನು ಘಟನೆಯ ಬಳಿಕ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಗೌತಮ್ ಇಲ್ಲಿನ ಮಹಿಳೆಯ ಮನೆಯೊಂದಕ್ಕೆ ಬರುತ್ತಿದ್ದ ಎನ್ನಲಾಗಿದೆ. ಈ ವಿಚಾರಕ್ಕೆ ಹತ್ಯೆಗೀಡಾಗಿರುವ ನವೀನ್ ಕೈ ಹಾಕಿರುವುದೇ ಈ ಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ರವಿವಾರ ನವೀನ್ ಪುತ್ರ 15 ವರ್ಷದ ನಿತೀನ್ ತನ್ನ ತಾಯಿ ಹಾಗೂ ಕಿರಿಯ ಸಹೋದರ ಮಹೇಶ್ ನನ್ನು ಬೈಕ್ ನಲ್ಲಿ ಕರೆದೊಯ್ದು, ಅವರ ಸ್ನೇಹಿತನ ನಿವಾಸದ ಬಳಿ ಬಿಟ್ಟುಬಂದಿದ್ದ. ರಾತ್ರಿ 8.15ರ ಸುಮಾರಿಗೆ ನಿತಿನ್ ಮನೆಗೆ ಹಿಂದಿರುಗಿದಾಗ ಅವನ ತಂದೆ ನವೀನ್ ಟಿವಿ ನೋಡುತ್ತಿದ್ದರು.
ಬಳಿಕ ನಿತಿನ್ ತನ್ನ ಸಹೋದರ ಕೀರ್ತನ್‌ನನ್ನು ಬೈಕ್‌ನಲ್ಲಿ ಕರೆದೊಯ್ದಿದ್ದಾನೆ. ಮಹೇಶ್ ಎಂಬವರ ಮನೆಯಲ್ಲಿ ಊಟ ಮಾಡಿದ ಬಳಿಕ ಅವರು, ಅವರ ತಾಯಿ, ಸಹೋದರರು ಹಾಗೂ ಸ್ನೇಹಿತ ಮಹೇಶ್ ತಂದೆ ಮಂಜುನಾಥ್ ರಾತ್ರಿ 10ರ ಸುಮಾರಿಗೆ ಮನೆಗೆ ಮರಳಿದ್ದರು. ಈ ವೇಳೆ ನವೀನ್ ನಾಯ್ಕ್ ಅಂಗಳದಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದರು. ನವೀನ್ ಅವರನ್ನು ಕರೆದರೂ ಅವರಿಂದ ಪ್ರತಿಕ್ರಿಯೆ ಬಾರದಿದ್ದ ವೇಳೆ ನೆರೆಯ ಮನೆಯ ನಾರಾಯಣ ಎಂಬವರು ಬಂದು ಪರಿಶೀಲಿಸಿದ್ದು, ನವೀನ್ ಮೃತಪಟ್ಟಿರುವುದು ತಿಳಿದು ಬಂದಿದೆ.
ನೆರೆಯ ಮನೆಯ ಮಹಿಳೆ ತನ್ನ ಮಗನೊಂದಿಗೆ ವಾಸವಿದ್ದರು. ಇವರ ಮನೆಗೆ ಗೌತಮ್ ಎಂಬ ಮಲ್ಪೆ ನಿವಾಸಿ ಬರುತ್ತಿದ್ದ. ಸುಮಾರು 15 ದಿನಗಳ ಹಿಂದೆ ಮಹಿಳೆ ಹಾಗೂ ಗೌತಮ್ ಗುಡ್ಡೆಯಂಗಡಿ ಕ್ರಾಸ್ ಬಳಿ ನಿಂತಿದ್ದರು. ಆಕೆಯ ಮನೆಗೆ ಭೇಟಿ ಮಾಡುತ್ತಿರುವ ಬಗ್ಗೆ ನವೀನ್ ತನಗೆ ಸಂಬಂಧವಿಲ್ಲದಿದ್ದರೂ ಗೌತಮ್ ಬಳಿ ಕೇಳಿದ್ದಾನೆ. ತನ್ನ ವೈಯಕ್ತಿಕ ವಿಚಾರದಲ್ಲಿನವೀನ್ ತಲೆ ಇಟ್ಟಿರುವುದರಿಂದ ಗೌತಮ್ ಆಕ್ರೋಶಗೊಂಡಿದ್ದನೆನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ನವೀನ್ ಅವರ ಪುತ್ರ ನಿತೀನ್ ಪೊಲೀಸರಿಗೆ ದೂರು ನೀಡಿದ್ದ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗೌತಮ್ ನನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.