ಪೇರಳೆ ಹಣ್ಣು ಕೀಳಲು ಬಿಡಲಿಲ್ಲ ಎಂದು ವ್ಯಕ್ತಿಯ ಪ್ರಾಣ ತೆಗೆದ ನೆರೆಮನೆಯವರು!
ಉತ್ತರಪ್ರದೇಶ: ಪೇರಳೆ ಹಣ್ಣನ್ನು ಕೀಳಲು ಬಿಡಲಿಲ್ಲ ಎಂದು ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಅಜೀಮ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶೇಖಪುರ ಗ್ರಾಮದಲ್ಲಿ ನಡೆದಿದೆ.
27 ವರ್ಷ ವಯಸ್ಸಿನ ಮೆಹಫೂಜ್ ಅಲಿ ಎಂಬವರ ಮನೆಯ ಮುಂಭಾಗದಲ್ಲಿದ್ದ ಪೇರಳೆ ಮರದಲ್ಲಿದ್ದ ಹಣ್ಣುಗಳನ್ನು ಕೀಳಲು ನೆರೆ ಮನೆಯವರು ಪ್ರಯತ್ನಿಸಿದ್ದಾರೆ. ಆದರೆ, ಹಣ್ಣು ಕೀಳಲು ಅಲಿ ಆಕ್ಷೇಪ ವ್ಯಕ್ತಪಡಿಸಿದ್ದು, ಇದೇ ಕ್ಷುಲ್ಲಕ ವಿಚಾರ ದೊಡ್ಡ ಗಲಾಟೆಯಾಗಿ ಮಾರ್ಪಟ್ಟುಕೊಲೆಯಲ್ಲಿ ಅಂತ್ಯವಾಗಿದೆ.
ನೆರೆಮನೆಯವರಿಂದ ತೀವ್ರವಾಗಿ ಹಲ್ಲೆಗೊಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಮೆಹಫೂಜ್ ಅಲಿಯನ್ನು ತಕ್ಷಣವೇ ರಾಂಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಚಿಕಿತ್ಸೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನೆರೆಯ ಮನೆ ನಿವಾಸಿ ಶಕೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಹತ್ಯೆಗೀಡಾದ ಮೆಹಫೂಜ್ ಅಲಿಯ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ತೀವ್ರ ಹಲ್ಲೆಗಳಿಂದಾದ ಗಾಯಗಳಿಂದ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.