ಆನ್ ಲೈನ್ ಶಿಕ್ಷಣ: ನೆಟ್ ವರ್ಕ್ ಸಮಸ್ಯೆಯ ಬಗ್ಗೆ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು?
ಬೆಂಗಳೂರು: ಕೊವಿಡ್ 19 ಹಿನ್ನೆಲೆಯಲ್ಲಿ ಆನ್ ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ನೆಟ್ ವರ್ಕ್ ಇಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ಈ ಸಂಬಂಧ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ದೂರದರ್ಶನ ಅಥವಾ ಮೊಬೈಲ್ ಇಲ್ಲದ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ಒದಗಿಸಲು ರಾಜ್ಯದಲ್ಲಿರುವ 5,766 ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳಲ್ಲಿ ಡಿವೈಸರ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಮುಖ್ಯಮಂತ್ರಿಯ ಸಲಹೆಗಾರರಾದ ಪ್ರಶಾಂತ್ ಪ್ರಕಾಶ್ ಮತ್ತು ಸರ್ಕಾರದ ಶೈಕ್ಷಣಿಕ ಸಲಹೆಗಾರರಾದ ಪ್ರೊ. ದೊರೆಸ್ವಾಮಿ ಜೊತೆ ತಮ್ಮ ಕಚೇರಿಯಲ್ಲಿ ಸೋಮವಾರ ಚರ್ಚಿಸಿದ ಬಳಿಕ ಈ ಬಗ್ಗೆ ಹೇಳಿಕೆ ನೀಡಿದ ಸಚಿವರು, ಕೋವಿಡ್ ಕಾರಣದಿಂದ ಶಾಲೆಗಳು ಆರಂಭ ಆಗದೇ ಇರುವುದರಿಂದ ಡಿಜಿಟಲ್ ಶಿಕ್ಷಣ ಇಲ್ಲವೇ ಆನ್ ಲೈನ್‌ನಂಥ ಪರ್ಯಾಯ ವ್ಯವಸ್ಥೆಯ ಮೂಲಕ ಮಕ್ಕಳನ್ನು ತಲುಪಬೇಕಾಗಿದೆ. ಈ ಸೌಲಭ್ಯ ವಂಚಿತ ಮಕ್ಕಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಶಿಕ್ಷಣ ಒದಗಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಗ್ರಾಮೀಣ ಮಕ್ಕಳ ಶಿಕ್ಷಣ ಮುಂದುವರಿಕೆ ಮತ್ತು ಕಲಿಕಾ ನಿರಂತರತೆಗೆ ಅನುಕೂಲವಾಗುವಂಥ ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ನೆಟ್ ವರ್ಕ್ ಸಮಸ್ಯೆ!
ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕಾ ನಿರಂತರತೆಗೆ ಅನುಕೂಲವಾಗುವಂತೆ ಅಂತರ್ಜಾಲ ನೆಟ್-ವರ್ಕ್ ಸಮಸ್ಯೆ ಪರಿಹರಿಸುವ ಕುರಿತು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಜೊತೆಗೂ ಸುರೇಶ್ ಕುಮಾರ್ ಸೋಮವಾರ ಚರ್ಚೆ ನಡೆಸಿದರು.
ಮಾಹಿತಿ ತಂತ್ರಜ್ಞಾನ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ್ ಮತ್ತು ತಮ್ಮ ಸೂಚನೆಯಂತೆ ರಾಜ್ಯದಲ್ಲಿ ಮೊಬೈಲ್ ನೆಟ್-ವರ್ಕ್ ಪೂರೈಕೆದಾರ ಕಂಪನಿಗಳ ಜೊತೆ ಮಾಹಿತಿ ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ ಚರ್ಚಿಸಿದ್ದು, ಅವರೆಲ್ಲಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಸಚಿವರ ಗಮನಕ್ಕೆ ತಂದಿದ್ದಾರೆ.
ಪ್ರಸ್ತುತ ಮಳೆಗಾಲ ಆಗಿರುವುದರಿಂದ ಮಲೆನಾಡು ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ನೆಟ್-ವರ್ಕ್ ಸಮಸ್ಯೆಯಿಂದಾಗಿ ಮಕ್ಕಳ ಪರ್ಯಾಯ ಬೋಧನಾ ಕ್ರಮಗಳಾದ ಆನ್‌ಲೈನ್ ಬೋಧನಾ ಕ್ರಮ ಇಲ್ಲವೇ ದೂರದರ್ಶನ ಚಂದನಾ ಪಾಠಗಳಿಗೆ ತೊಂದರೆ ಆಗಿದೆ. ಈ ಕುರಿತು ತ್ವರಿತವಾಗಿ ಗಮನ ಹರಿಸುವುದರ ಅಗತ್ಯವಿದ್ದು, ಮಕ್ಕಳ ಬೋಧನಾ ವಿಧಾನದ ಗುಣಮಟ್ಟ ಕಾಪಾಡಬೇಕಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು:
ಆನ್ ಲೈನ್ ಶಿಕ್ಷಣದ ನಡುವೆ ಅಶ್ಲೀಲ ವಿಡಿಯೋ ವೀಕ್ಷಣೆ ಹೆಚ್ಚಳ: ಸೈಬರ್ ಅಪರಾಧ ವಿಭಾಗದಿಂದ ಹದ್ದಿನ ಕಣ್ಣು
ನೆಟ್ ವರ್ಕ್ ಇಲ್ಲದ ಊರಿನಲ್ಲಿ “ಆನ್ ಲೈನ್ ಕ್ಲಾಸ್ ಸಂಕಟ” | ಶಿಕ್ಷಣ ಸಚಿವರೇ ಇವರ ಸಮಸ್ಯೆ ಕೇಳುವಿರಾ?
ಆನ್ ಲೈನ್ ಕ್ಲಾಸ್ ಗೆ ಹಾಜರಾಗಲು ಮೊಬೈಲ್ ಇಲ್ಲ ಎಂದು ಆತ್ಮಹತ್ಯೆಗೆ ಶರಣಾದ ಬಾಲಕಿ
ಆನ್ ಲೈನ್ ಕ್ಲಾಸ್ ಗೆ ಶುಲ್ಕವನ್ನು ಕಡಿಮೆ ಮಾಡಬೇಕು ಶಿಕ್ಷಣ ಸಂಸ್ಥೆಗಳಿಗೆ ಸುಪ್ರೀಂ ಸೂಚನೆ