ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಆಗಮಿಸಿದ ಹೊಸ ಅತಿಥಿಗಳು
ಮಂಗಳೂರಿನ ಪ್ರಮುಖ ಮೃಗಾಲಯಗಳಲ್ಲಿ ಒಂದಾಗಿರುವ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಅಳಿವಿನಂಚಿನಲ್ಲಿರುವ ತೋಳಗಳು ಆಗಮಿಸಿದೆ. ಪ್ರಾಣಿ ವಿನಿಮಯ ಯೋಜನೆಯಲ್ಲಿ ಆಂಧ್ರ ಪ್ರದೇಶದ ವಿಶಾಖಪಟ್ಟಣದ ಮೃಗಾಲಯದಿಂದ ಒಂದು ಜತೆ ತೋಳ ಪಿಲಿಕುಳ ಮೃಗಾಲಯಕ್ಕೆ ತರಿಸಲಾಗಿದೆ.
ಹೊಸ ಜಗತ್ತಿನ ಮಂಗಗಳೆಂದು ಕರೆಯಲ್ಪಡುವ 4 ಜತೆ ಅಳಿಲು ಮಂಗ ಮಾರ್ಮಸೆಟ್, ಟಾಮರಿಂನ್ ಗಳು ಕೂಡಾ ಸೇರ್ಪಡೆಯಾಗಿದ್ದು, ಇವು ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಕಂಡು ಬರುವ ಚಿಕ್ಕ ಜಾತಿಯ ಮಂಗಗಳಾಗಿವೆ. ಮೆಕ್ಸಿಕೋ ದೇಶದಲ್ಲಿ ಕಂಡು ಬರುವ ಬ್ಲೂ ಗೋಲ್ಡ್ ಮಕಾವ್, ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಗಾಲಾ, ದಕ್ಷಿಣ ಆಫ್ರಿಕಾ ಖಂಡದ ಟುರಾಕೋಗಳನ್ನು ಕೂಡಾ ಪಿಲಿಕುಳಕ್ಕೆ ತರಿಸಲಾಗಿದೆ.
ಹೊಸತಾಗಿ ಆಗಮಿಸಿರುವ ಪ್ರಾಣಿ, ಪಕ್ಷಿಗಳಿಗೆ ಆವರಣ ಸಮುಚ್ಚಯ ನಿರ್ಮಿಸಲು ರಿಲಾಯನ್ಸ್ ಫೌಂಡೇಶನ್ ಒಂದು ಕೋಟಿ ರೂ. ದೇಣಿಗೆ ನೀಡಿದೆ. ಹೊಸತಾಗಿ ಸೇರ್ಪಡೆಯಾದ ಪ್ರಾಣಿ ಪಕ್ಷಿಗಳಿಗೆ ಅವುಗಳ ನೈಸರ್ಗಿಕ ಆವಾಸ ಸ್ಥಾನವನ್ನು ಹೋಲುವ ಆವರಣಗಳನ್ನು ರಚಿಸಲಾಗಿದೆ. ಅವರಣದ ಒಳಗೆ ಪ್ರಾಣಿಗಳಿಗಾಗಿ, ಆಹಾರ ನೀಡುವ ಕೇಂದ್ರ, ಬ್ರೀಡಿಂಗ್ ಬಾಕ್ಸ್ ಇತ್ಯಾದಿ ಸಲಕರಣೆಗಳನ್ನು ಉಚಿತವಾಗಿ ಲೈಫ್ ಸೈನ್ಸ್ ಎಜುಕೇಶನ್ ಟ್ರಸ್ಟ್, ಬೆಂಗಳೂರು ಇವರು ನೀಡಿದ್ದಾರೆ. ಈಗಾಗಲೇ ಪಿಲಿಕುಳ ಮೃಗಾಲಯದಲ್ಲಿ 1,200ರಷ್ಟು ವಿವಿಧ ಜಾತಿಯ ಪ್ರಾಣಿ, ಪಕ್ಷಿ ಉರಗಗಳಿದ್ದು, ಇನ್ನು ಪ್ರಾಣಿಗಳನ್ನು ತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಎಚ್.ಜೆ. ಭಂಡಾರಿ ಪ್ರಕಟನೆಯಲ್ಲಿ ಮಾಹಿತಿ ನೀಡಿದ್ದಾರೆ.