ಆಟೋ ಚಾಲಕನ ಶವ ಬಾವಿಯಲ್ಲಿ ಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಆಟೋ ಚಾಲಕನ ಬರ್ಬರ ಹತ್ಯೆ ಬಯಲು

auto driver
13/04/2025

ಮಂಜೇಶ್ವರ: ಬಾವಿಯಲ್ಲಿ ಆಟೋ ಚಾಲಕನ ಮೃತದೇಹ ಪತ್ತೆಯಾಗಿರುವ ಘಟನೆಗೆ ಹೊಸ ತಿರುವು ದೊರಕಿದ್ದು, ಆಟೋ ಚಾಲಕನನ್ನು ಹತ್ಯೆ ಮಾಡಲಾಗಿರುವ ವಿಚಾರ ಮರಣೋತ್ತರ ಪರೀಕ್ಷೆಯಿಂದ ಬೆಳಕಿಗೆ ಬಂದಿದೆ.

ಕುಂಜತ್ತೂರು ಬಳಿಯ ಅಡ್ಕಪ್ಪಳ್ಳ ಮಾನಿಗುಡ್ಡೆಯಲ್ಲಿ ಆವರಣ ಗೋಡೆಯಿಲ್ಲದ ಬಾವಿಯಲ್ಲಿ ಮಂಗಳೂರಿನ ಮೂಲ್ಕಿ ಕೊಲಾಡು ನಿವಾಸಿ, ಮಂಗಳೂರಿನಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದ ಮೊಹಮ್ಮದ್ ಶರೀಫ್ (52) ಅವರು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಈ ಸಂಬಂಧ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ, ಕುತ್ತಿಗೆ ಹಾಗೂ ತಲೆಯ ಹಿಂಭಾಗದಲ್ಲಿ ಉಂಟಾದ ಇರಿತದ ಗಾಯವೇ  ಸಾವಿಗೆ ಕಾರಣವೆಂದು ತಿಳಿದು ಬಂದಿದ್ದು, ಈ ಮೂಲಕ ಆಟೋ ಚಾಲಕನ ಸಾವಿಗೆ ಹೊಸ ತಿರುವು ದೊರಕಿದೆ.

ಬಾವಿಯ ಸಮೀಪ ಕರ್ನಾಟಕ ನೋಂದಾಯಿತ  ಆಟೋ ರಿಕ್ಷಾ ಹೊಂಡದಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ನಡೆಸಿದ ಶೋಧ ಸಂದರ್ಭದಲ್ಲಿ ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಬಾವಿಯ ಬಳಿ ರಕ್ತ ಮಿಶ್ರಿತ ಬಟ್ಟೆಗಳು, ಪಾದರಕ್ಷೆ, ಪರ್ಸ್ ಪತ್ತೆಯಾಗಿತ್ತು.

ಸ್ಥಳೀಯರು ನೀಡಿದ ಮಾಹಿತಿಯಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಪರ್ಸ್ ತೆರೆದು ನೋಡಿದಾಗ ಮೃತಪಟ್ಟ ವ್ಯಕ್ತಿಯ ಭಾವಚಿತ್ರ ಹಾಗೂ ದಾಖಲೆ ಪತ್ರಗಳು ಕಂಡು ಬಂದಿವೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಮೊಹಮ್ಮದ್ ಶರೀಫ್ ನಾಪತ್ತೆಯಾದ ಬಗ್ಗೆ ಕೇಸು ದಾಖಲಾಗಿರುವ ವಿಷಯ ತಿಳಿದು ಬಂದಿದೆ. ವಿಷಯ ತಿಳಿದು ಸಂಬಂಧಿಕರು ಸ್ಥಳಕ್ಕೆ ತಲುಪಿ ಆಟೋ ರಿಕ್ಷಾ ನಾಪತ್ತೆಯಾದ ವ್ಯಕ್ತಿಯದ್ದೆಂದು ದೃಢೀಕರಿಸಿದ್ದಾರೆ.

ಎ. 11ರಂದು ಬೆಳಗ್ಗೆ ಬಾವಿಯಿಂದ ಮೇಲಕ್ಕೆತ್ತಿದ ಮೃತದೇಹದಲ್ಲಿ ಇರಿತದಿಂದ ಉಂಟಾದ ಗಾಯಗಳು ಕಂಡು ಬಂದಿತ್ತು. ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.

ಸದ್ಯ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮುಖ್ಯವಾಗಿ ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಗಮನಿಸಿ ಮುಂದಿನ ತನಿಖೆ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version